ನಿಗದಿತ ಕಾಲಮಿತಿಯೊಳಗೆ ಸರ್ಕಾರಿ ಯೋಜನೆಗಳನ್ನು ಫಲಾನುಭವಿಗಳಿಗೆ ತಲುಪಿಸಿ: ಕೋಟ ಶ್ರೀನಿವಾಸ್ ಪೂಜಾರಿ

ಉಡುಪಿ: ಪರಿಶಿಷ್ಟ ಜಾತಿ ಮತ್ತು ಪಂಗಡದವರ ಅಭಿವೃದ್ಧಿಗೆ ಸರ್ಕಾರ ಅನೇಕ ಯೋಜನೆ ಹಾಗೂ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದು, ಇದನ್ನು ಅರ್ಹ ಫಲಾನುಭವಿಗಳಿಗೆ ನಿಗದಿತ ಕಾಲಮಿತಿಯೊಳಗೆ ತಲುಪಿಸಬೇಕು ಎಂದು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಅವರು ಸೋಮವಾರ ಜಿಲ್ಲಾ ಪಂಚಾಯತ್‌ನ ಸಭಾಂಗಣದಲ್ಲಿ ನಡೆದ ಎಸ್.ಸಿ.ಎಸ್.ಪಿ ಮತ್ತು ಟಿ.ಎಸ್.ಪಿ, ಹಿಂದುಳಿದ ವರ್ಗ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸರಕಾರ ಪ್ರಸ್ತುತ ಸಾಲಿನಲ್ಲಿ ಆಯವ್ಯಯ ಮೊತ್ತದಲ್ಲಿ ಪ. ಜಾತಿ, ಪ. ಪಂಗಡದ ಜನಸಂಖ್ಯೆ ಆಧಾರದ ಮೇಲೆ ಶೇ. 24.10 ರಷ್ಟು ಅನುದಾನವನ್ನು ಮೀಸಲಿಟ್ಟಿದ್ದು, ಕಾಲೋನಿಗಳಿಗೆ ಮೂಲಭೂತ ಸೌಕರ್ಯವನ್ನು ಒದಗಿಸುವುದರ ಜೊತೆಗೆ, ವಿವಿಧ ಯೋಜನೆಗಳ ಅಡಿಯಲ್ಲಿ ಫಲಾನುಭವಿಗಳನ್ನು ಆಯ್ಕೆ ಮಾಡಿ ಆರ್ಥಿಕ ಸಹಾಯವನ್ನು ಕಲ್ಪಿಸಲು ಮುಂದಾಗಿದ್ದು ಇದರ ಸಮರ್ಪಕ ಅನುಷ್ಠಾನವಾಗಬೇಕು ಎಂದರು.

ಜಿಲ್ಲೆಯಲ್ಲಿನ ಪ.ಜಾತಿ ಹಾಗೂ ಪ. ಪಂಗಡದವರ ನಿವೇಶನ ರಹಿತ, ವಸತಿ ರಹಿತರ ಪಟ್ಟಿಯನ್ನು ಮಾಡಿ ಅದಕ್ಕನುಗುಣವಾಗಿ ಲಭ್ಯವಿರುವ ಅನುದಾನವನ್ನು ಬಳಕೆ ಮಾಡಿ ಸೌಲಭ್ಯಗಳನ್ನು ಕಲ್ಪಿಸಬೇಕು, ರಾಜೀವ್ ಗಾಂಧಿ ನಿಗಮದಿಂದ ವಸತಿ ಸೌಲಭ್ಯ ಕಲ್ಪಿಸಲಾಗುತ್ತಿದ್ದು ಕೆಲವೊಂದು ಷರತ್ತಿನಿಂದಾಗಿ ಸಮರ್ಪಕ ಅನುಷ್ಠಾನವಾಗುತ್ತಿಲ್ಲದ ಹಿನ್ನಲೆ ಇಲಾಖೆಯ ವತಿಯಿಂದಲೇ ನೇರವಾಗಿ ಗೃಹ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕೆಂದು ಸೂಚನೆ ನೀಡಿದರು.

ಪೌರ ಕಾರ್ಮಿಕರ ಅಭಿವೃದ್ಧಿಯ ಅನುದಾನವನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸಬೇಕು ಎಂದ ಅವರು, ಜಿಲ್ಲೆಯಲ್ಲಿ 368 ಪೌರ ಕಾರ್ಮಿಕರ ಹುದ್ದೆಗಳಿದ್ದು ಅದರಲ್ಲಿ 130 ಖಾಯಂ ಆಗಿ, 164 ಜನ ಗುತ್ತಿಗೆ ಹಾಗೂ ಹೊರ ಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರನ್ನು ಖಾಯಂಗೊಳಿಸುವ ನಿಟ್ಟಿನಲ್ಲಿ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಸೂಚಿಸಿದರು.

ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆ ಆಯುಕ್ತ ರಾಕೇಶ್ ಕುಮಾರ್ ಕೆ, ಜಿಲ್ಲಾಧಿಕಾರಿ ಕೂರ್ಮರಾವ್ ಎಂ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಎಚ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಆಶೀಷ್ ರೆಡ್ಡಿ, ರಾಜ್ಯ ಎಸ್.ಸಿ.ಎಸ್.ಪಿ ಮತ್ತು ಟಿ.ಎಸ್.ಪಿ ನಿರ್ದೇಶಕಿ ಊರ್ಮಿಳಾ, ಡಾ. ಬಾಬು ಜಗಜ್ಜೀವನ್ ರಾವ್ ಸಂಶೋಧನಾ ಸಂಸ್ಥೆಯ ನಿರ್ದೇಶಕ ಅರುಣ್ ಫುಟಾರ್ಡೋ ಹಾಗೂ ಜಿಲ್ಲಾ ಮಟ್ಟದ ಅನುಷ್ಠಾನಾಧಿಕಾರಿಗಳು ಉಪಸ್ಥಿತರಿದ್ದರು.