ಹೊಸದಿಲ್ಲಿ ನಿಜಾಮುದ್ದೀನ್ ಮುಸ್ಲಿಂ ಧಾರ್ಮಿಕ ಸಮಾವೇಶ: ರಾಜ್ಯದಿಂದ 1500  ಮಂದಿ ಭಾಗಿ

ಬೆಂಗಳೂರು: ಹೊಸದಿಲ್ಲಿಯ ನಿಜಾಮುದ್ದೀನ್‍ನ ಅಲಾಮಿ ಮಾರ್ಕೆಜ್ ಮಸೀದಿಯಲ್ಲಿ ಮಾ.13 ರಿಂದ 15 ರವರೆಗೆ ನಡೆದಿದ್ದ ಮುಸಲ್ಮಾನರ ಧಾರ್ಮಿಕ ಸಮಾವೇಶದಲ್ಲಿ ರಾಜ್ಯದ 1,500 ಮಂದಿ ಭಾಗವಹಿಸಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಪತ್ತೆ ಮಾಡಿದೆ.

ಈ ಪಟ್ಟಿಯನ್ನು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ನೀಡಿದ್ದು, ರಾಜ್ಯದ ಅಧಿಕಾರಿಗಳು ಈವರೆಗೆ 800 ಮಂದಿಯ ಜತೆ ಸಂಪರ್ಕ ಸಾಧಿಸಿದ್ದಾರೆ.
800 ಮಂದಿಯನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿ ಅವರಿಗೆ ಸೋಂಕು ಇದೆಯೇ ಎಂದು ಪತ್ತೆ ಮಾಡಲಾಗುತ್ತಿದೆ. ಸದ್ಯಕ್ಕೆ 143 ಮಂದಿಯ ಗಂಟಲ ದ್ರವದ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದೆ. 1,500 ಮಂದಿಯ ಹೆಸರು ಪಟ್ಟಿಯಲ್ಲಿ ಇದ್ದರೂ ಎಲ್ಲರೂ ಸಮಾವೇಶದಲ್ಲಿ ಭಾಗಿಯಾಗದೇ ಇರಲೂಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ.
ಈ ಕುರಿತು ಮಾಹಿತಿ ನೀಡಿದ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್ ಅಕ್ತರ್, ಇವರೆಲ್ಲರನ್ನೂ ಸರಕಾರದ ಕ್ವಾರಂಟೈನ್ ಕೇಂದ್ರಗಳಲ್ಲಿ ಇರಿಸಲು ತೀರ್ಮಾನಿಸಲಾಗಿದೆ. ಗುರುವಾರವೇ ಎಲ್ಲರನ್ನೂ ಸಂಪರ್ಕಿಸಲಾಗುವುದು ಎಂದು ತಿಳಿಸಿದ್ದಾರೆ.
ಸಮಾವೇಶದಲ್ಲಿ ಭಾಗವಹಿಸಿದವರು 080-29711171 ಸಹಾಯವಾಣಿಗೆ ಕರೆ ಮಾಹಿತಿ ನೀಡಬೇಕು ಎಂದು ಇಲಾಖೆ ಮನವಿ ಮಾಡಿದೆ.