ನವದೆಹಲಿ: ದೆಹಲಿಯಲ್ಲಿ ದಟ್ಟವಾದ ಮಬ್ಬು ಆವರಿಸಿದ್ದು, ಗಾಳಿಯ ಗುಣಮಟ್ಟವು ‘ತೀವ್ರ’ ವಿಭಾಗದಲ್ಲಿ ಉಳಿದಿದೆ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (CPCB) ಸೋಮವಾರದ ಅಂಕಿಅಂಶಗಳನ್ನು ತೋರಿಸಿದೆ. ಇದು ಸತತ ನಾಲ್ಕನೇ ದಿನವಾಗಿದ್ದು, ರಾಷ್ಟ್ರ ರಾಜಧಾನಿಯಲ್ಲಿ ‘ತೀವ್ರ’ ಗಾಳಿಯ ಗುಣಮಟ್ಟ ದಾಖಲಾಗಿದೆ.
CPCB ಡೇಟಾ ಪ್ರಕಾರ ದೆಹಲಿಯ ಒಟ್ಟಾರೆ ವಾಯು ಗುಣಮಟ್ಟ ಸೂಚ್ಯಂಕ (AQI) 437 ದಾಖಲಾಗಿದೆ.
ರಾಷ್ಟ್ರ ರಾಜಧಾನಿಯಲ್ಲಿನ ಮಾಲಿನ್ಯ ಬಿಕ್ಕಟ್ಟಿನ ಕುರಿತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಇಂದು ಉನ್ನತ ಮಟ್ಟದ ಸಭೆ ನಡೆಸಲಿದ್ದಾರೆ. ಮಧ್ಯಾಹ್ನ 12 ಗಂಟೆಗೆ ನಿಗದಿಯಾಗಿರುವ ಸಭೆಯಲ್ಲಿ ದೆಹಲಿ ಪರಿಸರ ಸಚಿವ ಗೋಪಾಲ್ ರೈ ಮತ್ತು ಸಾರಿಗೆ, ಎಂಸಿಡಿ, ದೆಹಲಿ ಪೊಲೀಸ್ ಮತ್ತು ದೆಹಲಿ ಟ್ರಾಫಿಕ್ ಪೋಲೀಸ್ ಮುಂತಾದ ಸಂಬಂಧಪಟ್ಟ ಇಲಾಖೆಗಳ ಹಿರಿಯ ಅಧಿಕಾರಿಗಳು ಭಾಗವಹಿಸಲಿದ್ದಾರೆ.
ದೆಹಲಿ ಮತ್ತು ರಾಷ್ಟ್ರ ರಾಜಧಾನಿ ಪ್ರದೇಶದಲ್ಲಿ (ಎನ್‌ಸಿಆರ್) ಭಾನುವಾರ ಆರಂಭಿಸಲಾದ ಗ್ರೇಡೆಡ್ ರೆಸ್ಪಾನ್ಸ್ ಆಕ್ಷನ್ ಪ್ಲಾನ್ (ಜಿಆರ್‌ಎಪಿ) ಯ ಕೇಂದ್ರದ ಹಂತ IV ಅನುಷ್ಠಾನದ ಕುರಿತು ಸಭೆಯಲ್ಲಿ ಚರ್ಚಿಸಲಾಗುವುದು ಎಂದು ವರದಿಯಾಗಿದೆ.
ಪಂಜಾಬಿನಲ್ಲಿ ಕೃಷಿಕರು ಹಳೆದ ಹಲವು ದಿನಗಳಿಂದ ಎಡೆಬಿಡದೆ ಕೊಯ್ದ ಪೈರಿನ ಕೂಳೆಯನ್ನು ಸುಡುತ್ತಿರುವುದೇ ದೆಹಲಿಯಲ್ಲಿ ಮಾಲಿನ್ಯ ಏರಿಕೆ ಕಾರಣ ಎನ್ನುವ ಅಂಕಿ ಅಂಶಗಳನ್ನು ‘ನಾಸಾ’ ದತ್ತಾಂಶಗಳು ತೋರಿಸಿವೆ.