ಹೊಸದಿಲ್ಲಿ: ನಗರದ ಸಿವಿಲ್ ಲೈನ್ಸ್ನಲ್ಲಿರುವ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಅಧಿಕೃತ ನಿವಾಸದ ‘ಸುಂದರೀಕರಣ’ಕ್ಕೆ 45 ಕೋಟಿ ರೂ ವೆಚ್ಚ ಮಾಡಲಾಗಿದೆ ಎಂದು ಬಿಜೆಪಿ ಮಂಗಳವಾರ ಹೇಳಿಕೊಂಡಿದ್ದು, ‘ನೈತಿಕ’ ನೆಲೆಯಲ್ಲಿ ರಾಜೀನಾಮೆ ನೀಡುವಂತೆ ಒತ್ತಾಯಿಸಿದೆ.
ವರದಿಗಳ ಪ್ರಕಾರ ಅರವಿಂದ್ ಕೇಜ್ರಿವಾಲ್ ಅವರ ವಸತಿ ಗೃಹದ ನವೀಕರಣಕ್ಕೆ ರೂ 44.78 ಕೋಟಿ ಖರ್ಚು ಮಾಡಲಾಗಿದೆ. ಕೊರೋನಾ ಸಂಕಷ್ಟ ಕಾಲದಲ್ಲಿ ಆಮ್ಲಜನಕ ಟ್ಯಾಂಕರ್ಗಳನ್ನು ಖರೀದಿಸಲು ಹಣವಿಲ್ಲ ಎಂದಿದ್ದ ದೆಹಲಿ ಎಎಪಿ ಸರ್ಕಾರವು ತಲಾ 5 ಲಕ್ಷ ರೂಪಾಯಿ ಮೌಲ್ಯದ 23 ಪರದೆಗಳನ್ನು ಖರೀದಿಸಲು ಹಣ ಹೊಂದಿತ್ತು ಎಂದು ಆರೋಪ ಮಾಡಲಾಗಿದೆ.
ಇಷ್ಟು ಮಾತ್ರವಲ್ಲದೆ ಒಳಾಂಗಣ ಅಲಂಕಾರಕ್ಕೆ 11 ಕೋಟಿ, ಲೈಟ್ಗಳು, ಫ್ಯಾನ್ಗಳು ಮತ್ತು ಜನರೇಟರ್ಗಳಿಗಾಗಿ 2.5 ಕೋಟಿ, ಮಾರ್ಬಲ್ ಗಾಗಿ 6 ಕೋಟಿ, ವಾರ್ಡ್ ರೋಬ್ ಗಾಗಿ 1.4 ಕೋಟಿ, 2.85 ಕೋಟಿ ರೂಪಾಯಿಗಳನ್ನು ಅಗ್ನಿಶಾಮಕ ವ್ಯವಸ್ಥೆಗಾಗಿ ದುಂದುವೆಚ್ಚ ಮಾಡಲಾಗಿದೆ.
ಹಿರಿಯ ಪಿಡಬ್ಲ್ಯುಡಿ ಅಧಿಕಾರಿಯೊಬ್ಬರು ಮಾಧ್ಯಮಕ್ಕೆ ಹೇಳಿರುವ ಪ್ರಕಾರ ಇದು ನವೀಕರಣವಲ್ಲ, ಹಳೆಯ ಕಟ್ಟಡದ ಸ್ಥಳದಲ್ಲಿ ಹೊಸ ಕಟ್ಟಡ ಬಂದಿದೆ, ಅವರ ಕ್ಯಾಂಪ್ ಕಚೇರಿಯೂ ಇದೆ, ಸುಮಾರು ₹ 44 ಕೋಟಿ ವೆಚ್ಚವಾಗಿದೆ. ಆದರೆ ಹಳೆಯ ಕಟ್ಟಡಗಳನ್ನು ಹೊಸದರೊಂದಿಗೆ ಬದಲಾಯಿಸಲಾಗಿದೆ.
ಸಿವಿಲ್ ಲೈನ್ಸ್ನ 6, ಫ್ಲಾಗ್ಸ್ಟಾಫ್ ರಸ್ತೆಯಲ್ಲಿರುವ ಕೇಜ್ರಿವಾಲ್ ಅವರ ಸರ್ಕಾರಿ ವಸತಿ ಸೌಕರ್ಯಗಳ “ಸೇರ್ಪಡೆ/ಪರ್ಯಾಯ” ಕ್ಕೆ ಮಂಜೂರಾದ 43.70 ಕೋಟಿಯ ವಿರುದ್ಧ ಒಟ್ಟು 44.78 ಕೋಟಿ ರೂ ಖರ್ಚು ಮಾಡಲಾಗಿದೆ ಎಂದು ಮೂಲಗಳು ಒದಗಿಸಿದ ದಾಖಲೆಗಳು ತೋರಿಸಿವೆ. ಸೆಪ್ಟೆಂಬರ್ 9, 2020 ರಿಂದ ಜೂನ್ 2022 ರ ನಡುವೆ ಆರು ಹಂತಗಳಲ್ಲಿ ಹಣವನ್ನು ಖರ್ಚು ಮಾಡಲಾಗಿದೆ ಎಂದು ದಾಖಲೆಗಳು ತೋರಿಸಿವೆ ಎಂದು ಮಾಧ್ಯಮ ವರದಿಗಳಾಗಿವೆ.
ದೆಹಲಿಯು ಕೋವಿಡ್-19 ವಿರುದ್ಧ ಹೋರಾಡುತ್ತಿದ್ದ ಸಮಯದಲ್ಲಿ ಕೇಜ್ರಿವಾಲ್ ಅವರ ಬಂಗಲೆಯ “ಸುಂದರೀಕರಣ” ಕ್ಕೆ 45 ಕೋಟಿ ಖರ್ಚು ಮಾಡಲಾಗಿದೆ ಎಂದು ದೆಹಲಿ ಬಿಜೆಪಿ ಅಧ್ಯಕ್ಷ ವೀರೇಂದ್ರ ಸಚ್ದೇವ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಕೋವಿಡ್ ಹಂತದಲ್ಲಿ ಹೆಚ್ಚಿನ ಸಾರ್ವಜನಿಕ ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಂಡಾಗ ತಮ್ಮ ಬಂಗಲೆಯ ಸೌಂದರ್ಯೀಕರಣಕ್ಕೆ ಸುಮಾರು ₹ 45 ಕೋಟಿ ಖರ್ಚು ಮಾಡಿದ ಅವರ ನೈತಿಕ ಅಧಿಕಾರದ ಬಗ್ಗೆ ಕೇಜ್ರಿವಾಲ್ ದೆಹಲಿಯ ಜನರಿಗೆ ಉತ್ತರಿಸಬೇಕು ಎಂದು ಒತ್ತಾಯಿಸಿದ್ದಾರೆ.