ಮಣಿಪಾಲ: ಮಾಹೆಯ 30 ನೇ ಘಟಿಕೋತ್ಸವ ಕಾರ್ಯಕ್ರಮವು ನವೆಂಬರ್ 18, 19 ಮತ್ತು 20 ರಂದು ಮೂರು ದಿನಗಳ ಕಾಲ ನಡೆಯಲಿದ್ದು, ಈ ಸಂದರ್ಭದಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಶೈಕ್ಷಣಿಕ ಕ್ಷೇತ್ರದ ಅನೇಕ ಸಾಧ್ಯತೆಗಳ ಕುರಿತು ಚರ್ಚೆಗಳು ನಡೆಯಲಿದ್ದು ಸುಮಾರು ಐದು ಸಾವಿರ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸುವರು ಎಂದು ಮಾಹೆ ಸಹ ಕುಲಪತಿ ಎಚ್.ಎಸ್ ಬಲ್ಲಾಳ್ ಇಂದು ನಡೆದ ರಾಷ್ಟೀಯ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.
ಘಟಿಕೋತ್ಸವದ ಮೊದಲ ದಿನ-ನವೆಂಬರ್ 18 ರಂದು ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಲೆಫ್ಟಿನೆಂಟ್ ಜನರಲ್ ಮಾಧುರಿ ಕಾನಿಟ್ಕರ್ ಮುಖ್ಯ ಅಥಿತಿಗಳಾಗಿ ಭಾಗವಹಿಸಲಿದ್ದಾರೆ. ನವೆಂಬರ್ 19 ರಂದು ಭಾರತ ಸರ್ಕಾರದ ರಕ್ಷಣಾ ಸಚಿವರ ವೈಜ್ಞಾನಿಕ ಸಲಹೆಗಾರ ಡಾ. ಜಿ. ಸತೀಶ್ ರೆಡ್ಡಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ನವೆಂಬರ್ 20ರಂದು ನಡೆಯುವ ಕಾರ್ಯಕ್ರಮದಲ್ಲಿ ಆಕ್ಸಿಸ್ ಬ್ಯಾಂಕ್ ನ ಎಂ.ಡಿ. ಹಾಗೂ ಸಿಇಒ ಅಮಿತಾಭ್ ಚೌಧರಿ ಮುಖ್ಯ ಅತಿಥಿಯಾಗಿ ಭಾಗವಹಿಸುವರು ಎಂದರು.
ಈ ಸಂದರ್ಭದಲ್ಲಿ ಮಾಹೆಯು ತನ್ನ ವಿಶಾಲವಾದ ಹಿನ್ನೆಲೆಯೊಂದಿಗೆ ಹೊಸ ಆವಿಷ್ಕಾರಗಳು ಮತ್ತು ಉದ್ಯಮಶೀಲತೆಯನ್ನು ಬೆಂಬಲಿಸುವ ಪರಿಕಲ್ಪನೆಗಳ ಬಗ್ಗೆ ಚರ್ಚೆಗಳು ನಡೆಯಲಿವೆ. ಜೊತೆಗೆ ರಾಷ್ಟ್ರೀಯ ಶಿಕ್ಷಣ ನೀತಿ 2020 ಹಾಗೂ ಅದರ ನಿರೀಕ್ಷಿತ ಫಲಿತಾಂಶಗಳ ಕುರಿತು ವಿಸ್ತೃತ ಚರ್ಚೆಯು ನಡೆಯಲಿದೆ. ಈಗಾಗಲೇ ಮಾಹೆಗೆ ನ್ಯಾಕ್ ನಿಂದ A++ ಗ್ರೇಡ್ ಲಭ್ಯವಾಗಿದೆ. ಅಲ್ಲದೆ ಸಂಸ್ಥೆಯ ಅನೇಕ ತಾಂತ್ರಿಕ
ಯೋಜನೆಗಳನ್ನು ಎನ್ ಬಿಎ ಅಂಗೀಕರಿಸಿದೆ. ಮಾಹೆಯು ಶೈಕ್ಷಣಿಕ ಶ್ರೇಷ್ಠತೆಯನ್ನು ಸಾಧಿಸಲು ನಡೆಸುತ್ತಿರುವ ಪ್ರಯತ್ನಗಳ ಕುರಿತು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಶ್ಲಾಘನೆಗಳು ವ್ಯಕ್ತವಾಗಿವೆ. ಭಾರತ ಸರ್ಕಾರದ ಶೈಕ್ಷಣಿಕ ಸಚಿವಾಲಯದ ಎನ್.ಐ.ಆರ್.ಎಫ್-2022 ರ ಪ್ರಕಾರ ವಿಶ್ವವಿದ್ಯಾಲಯಗಳ ವಿಭಾಗದಲ್ಲಿ ಮಾಹೆಗೆ ಏಳನೇ ಸ್ಥಾನ ದೊರೆತಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿಯೂ ಉತ್ತಮ ಶ್ರೇಯಾಂಕ ಪಡೆಯಲು ಮಾಹೆಯು ನಿರಂತರ ಪ್ರಯತ್ನ ನಡೆಸುತ್ತಿದೆ ಎಂದು ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾಹೆಯ ಉಪಕುಲಪತಿ ಲೆಫ್ಟಿನೆಂಟ್ ಜನರಲ್ (ಡಾ) ಎಂ.ಡಿ. ವೆಂಕಟೇಶ್, ರಿಜಿಸ್ಟ್ರಾರ್ ಡಾ. ನಾರಾಯಣ ಸಭಾಹಿತ್, ಸಾರ್ವಜನಿಕ ಸಂಪರ್ಕ, ಮಾಧ್ಯಮ ಮತ್ತು ಸಾಮಾಜಿಕ ಮಾಧ್ಯಮದ ನಿರ್ದೇಶಕ ಎಸ್. ಪಿ. ಕರ್ ಉಪಸ್ಥಿತರಿದ್ದರು.