ಅಂದಿನ ದೀಪಾವಳಿ ಹೀಗಿತ್ತು, ಇಂದಿನ ದೀಪಾವಳಿ ಹೀಗುಂಟು: ದೀಪಾವಳಿಯ ಒಂದು ಅವಲೋಕನವಿದು

ಡಾ. ಪರಶುರಾಮ ಕಾಮತ್

ಬೆಳಕಿನ ಹಬ್ಬ ದೀಪಾವಳಿ ಮತ್ತೆ ಬಂದಿದೆ. ಸುಮಾರು ಎರಡು ದಶಕಗಳ ಹಿಂದಿನ ದೀಪಾವಳಿ ಆಚರಣೆಯ ಸೊಗಡು ಇಂದು ಎಲ್ಲೋ ಮಾಯವಾದಂತೆ ಕಾಣಿಸುತ್ತಿದೆ. ಅಂದಿನ ದಿನಗಳಲ್ಲಿ ಅವಿಭಕ್ತ ಕುಟುಂಬಗಳಿದ್ದವು. ಹೀಗಾಗಿ ಮನೆ ತುಂಬಾ ಸದಸ್ಯರು, ಅವರೊಳಗಿನ ಅವಿನಾಭಾವ ಸಂಬಂಧ ಕುಟುಂಬದ ಒಗ್ಗಟ್ಟಿಗೆ ಸಹಕಾರಿಯಾಗಿತ್ತು. ದೀಪಾವಳಿಯಂದು ಮನೆಯವರೆಲ್ಲರೂ ಸಕ್ರೀಯವಾಗಿ ಭಾಗವಹಿಸುವ ಮೂಲಕ ಹಬ್ಬದ ಆಚರಣೆಗೆ ವಿಶೇಷ ಮೆರುಗನ್ನು ನೀಡುತ್ತಿದ್ದರು.

ಇಂದಿನ ವಿಭಕ್ತ ಕುಟುಂಬಗಳಲ್ಲಿ ತಂದೆ ತಾಯಿ ಮತ್ತು ಮಕ್ಕಳು ಮಾತ್ರವಿರುವುದರಿಂದ ತಕ್ಕ ಮಟ್ಟಿನಲ್ಲಿ ದೀಪಾವಳಿಯ ಆಚರಣೆ ನಡೆಯುತ್ತಿದೆ. ವಿಪರ್ಯಾಸವೆಂದರೆ ಉದ್ಯೋಗವನ್ನರಸಿ ದೂರದ ಊರುಗಳಿಗೆ ಮತ್ತು ವಿದೇಶಕ್ಕೆ ಹೋದ ಮಕ್ಕಳು ಕೇವಲ ವಯೋವೃದ್ಧ ಹೆತ್ತವರನ್ನು ಮಾತ್ರ ಊರಿನ ಮನೆಯಲ್ಲಿ ಬಿಟ್ಟಿರುತ್ತಾರೆ. ಹೀಗಾಗಿ ಮಕ್ಕಳು, ಮೊಮ್ಮಕ್ಕಳು ಬಾರದೆ ದೀಪಾವಳಿಯನ್ನು ಯಾವ ರೀತಿಯಲ್ಲಿ ಆಚರಿಸುವುದೆನ್ನುವ ಚಿಂತೆ ಕೆಲವು ಹೆತ್ತವರಲ್ಲಿದೆ.

ಅಂದು ನರಕ ಚತುರ್ದಶಿಯ ಹಿಂದಿನ ದಿನ ತೈಲಾಭ್ಯಂಗಕ್ಕೆ ಬೇಕಾದ ತಯಾರಿ ಬೆಳಿಗ್ಗೆಯಿಂದಲೇ ಪ್ರಾರಂಭವಾಗುತ್ತಿತ್ತು. ಮನೆಯ ಮುಂದಿನ ಅಂಗಳಕ್ಕೆ ಸೆಗಣಿ ಸಾರಿಸುತ್ತಿದ್ದರು. ಆದರೆ ಇಂದು ಕಾಂಕ್ರೀಟ್ ನೆಲದಿಂದಾಗಿ ಆ ಸಂಪ್ರದಾಯ ಕಾಣಸಿಗುತ್ತಿಲ್ಲ. ಕೂಡು ಕುಟುಂಬಗಳಿದ್ದಾಗ ಸ್ನಾನಗೃಹದಲ್ಲಿ ದೊಡ್ಡದಾದ ತಾಮ್ರದ ಹಂಡೆಗಳು ಕಾಣಸಿಗುತ್ತಿದ್ದವು. ಅವುಗಳ ಸ್ವಚ್ಛತೆಯೊಂದಿಗೆ ಹಿತ್ತಾಳೆಯ ಕೊಡಪಾನವನ್ನು ಫಳಫಳ ಹೊಳೆಯುವಂತೆ ಮನೆಯ ಯುವತಿಯರು ಮಾಡುತ್ತಿದ್ದರು. ಆದರೆ ಇಂದು ಅಪಾರ್ಟ್ಮೆಂಟ್ ಸಂಸ್ಕೃತಿಯಿಂದಾಗಿ ನೀರಿನ ಹಂಡೆಗಳು ಮಾಯವಾಗಿವೆ. ಬದಲಾಗಿ ನೀರನ್ನು ಸಂಗ್ರಹಿಸಿಡಲು ಡ್ರಮ್‌ನ ಮೊರೆ ಹೋಗಿರುವುದನ್ನು ಕಾಣಬಹುದಾಗಿದೆ.

ಹಿಂದಿನ ಕಾಲದಲ್ಲಿ ಸ್ನಾನಗೃಹದ ಸ್ವಚ್ಛತಾ ಕಾರ್ಯವಾದ ಮೇಲೆ ಹೆಂಗಳೆಯರ ಕೈ ಚಳಕದಿಂದ ಗೋಡೆ, ಬಾಗಿಲು, ಕಿಟಕಿಯ ಮೇಲೆ ರಂಗು ರಂಗಿನ ರಂಗೋಲಿ, ಶುಭಾಷಯಗಳು ಜೊತೆಗೆ ಆಕರ್ಷಕ ಚಿತ್ತಾರಗಳು ಮೂಡುತ್ತಿತ್ತು. ಆದರೆ ಇಂದು ಸ್ನಾನಗೃಹವೆಲ್ಲಾ ‘ಟೈಲ್ಸ್ಮಯ’ವಾಗಿರುವುದರಿಂದ ಆ ಚಂದ ಕಾಣಿಸುತ್ತಿಲ್ಲ.

ಅಂದು ಮನೆಯ ಮತ್ತೈದೆಯರೆಲ್ಲ ಸೇರಿ ಬಾವಿಗೆ ಜಲಪೂಜೆಯನ್ನು ಮಾಡುತ್ತಿದ್ದರು. ಆದರೆ ಇಂದು ನಗರೀಕರಣದಿಂದಾಗಿ ಬಾವಿಗಳು ಮಾಯವಾಗುತ್ತಿವೆ. ಕೊಳವೆ ಬಾವಿಯನ್ನು ಆಶ್ರಯಿಸಿದ್ದಾರೆ. ನೀರಿಗಾಗಿ ಹಾಹಾಕಾರವಿರುವ ಇಂದಿನ ಪರಿಸ್ಥಿತಿಯಲ್ಲಿ ನೀರಿನ ಮೂಲಗಳು ತನ್ನ ಅಸ್ಥಿತ್ವವನ್ನು ಕಳೆದುಕೊಳ್ಳುತ್ತಿದೆ. ಪಾಲಿಕೆಯ ನೀರನ್ನೆ ನಂಬಿರುವಾಗ ಜಲಪೂಜೆವೆಲ್ಲಿ? ಇನ್ನು ಬಿಸಿ ನೀರಿಗಾಗಿ ವಿದ್ಯುತ್ ವಾಟರ್ ಹೀಟರ್, ಗ್ಯಾಸ್ ಗೀಝರ್, ಅಲ್ಲದೇ ಸೋಲಾರ್ ವಾಟರ್ ಹೀಟರ್‌ನ ಬಳಕೆಯೂ ಹೆಚ್ಚುತ್ತಿದೆ.

 

ಸಂಜೆ ಏಳರ ಹೊತ್ತಿಗೆ ಮನೆಯ ಮುಂದುಗಡೆ ಹಣತೆ ದೀಪಗಳ ಬೆಳಕು ಹಬ್ಬಕ್ಕೆ ವಿಶೇಷವಾದ ಕಳೆಯನ್ನು ನೀಡುತ್ತದೆ. ಆದರೆ ಇಂದು ಕ್ಯಾಂಡಲ್‌ನ್ನು ಉಪಯೋಗಿಸುವ ಮೂಲಕ ಭಾರತೀಯ ಸಂಸ್ಕೃತಿಯನ್ನು ಮರೆಯುತ್ತಿದ್ದೇವೆ. ಬದಲಾಗಿ ಹಣತೆ ದೀಪಗಳನ್ನು ಹಚ್ಚುವ ಮೂಲಕ ಗುಡಿ ಕೈಗಾರಿಕೆಯನ್ನು ಪ್ರೋತ್ಸಾಹಿಸೋಣ.

ಎಲ್ಲಾ ಬದಲಾವಣೆಯ ನಡುವೆಯೂ “ಗೂಡು ದೀಪ” ತನ್ನ ಆಕರ್ಷನೆಯನ್ನು ಉಳಿಸಿಕೊಂಡಿದೆ. ಬಾನಂಗಳದಲ್ಲಿ ಚಿತ್ತಾಕರ್ಷಕವನ್ನು ಮೂಡಿಸುವ ಪಟಾಕಿಯ ಬೇಡಿಕೆಯೂ ಹೆಚ್ಚುತ್ತಿದೆ. ದೀಪಾವಳಿಯ ಉಡುಗೊರೆಯಾಗಿ ಮನೆಯ ಹಿರಿಯರು ಹೊಸ ಬಟ್ಟೆಯನ್ನು ನೀಡಿ ಶುಭ ಹಾರೈಸುವ ಸಂಪ್ರದಾಯ ಇನ್ನೂ ವಿಭಕ್ತ ಕುಟುಂಬದಲ್ಲಿ ಉಳಿದುಕೊಂಡಿದೆ.

ಅಂದು ಹೆಚ್ಚಿನ ಕುಟುಂಬಗಳು ಕೃಷಿಯೊಂದಿಗೆ ಹೈನುಗಾರಿಕೆಯನ್ನು ನೆಚ್ಚಿಕೊಂಡಿದ್ದವು. ಹೀಗಾಗಿ ಕೊಟ್ಟಿಗೆಯಲ್ಲೆಲ್ಲಾ ದನ ಕರುಗಳು ತುಂಬಿರುತ್ತಿದ್ದವು. ಗೋ ಪೂಜೆಯಂದು ದನಕರುಗಳಿಗೆಲ್ಲಾ ಉಪಚರಿಸಿ, ಆರತಿ ಬೆಳಗುತ್ತಿದ್ದರು. ಆದರೆ ಭಾರತದಲ್ಲಿಂದು ಗೋವುಗಳಿಗೆ ವಿಶೇಷವಾದ ಸ್ಥಾನಮಾನವಿದ್ದರೂ ಅವುಗಳನ್ನು ಸಾಕುವವರ ಸಂಖ್ಯೆ ಕ್ಷೀಣಿಸುತ್ತಿದೆ.

‘ಬದಲಾವಣೆ ಜಗದ ನಿಯಮವಾದರೂ’ ಹಬ್ಬದ ಮೂಲ ಸ್ವರೂಪ, ಆಶಯವನ್ನು ಉಳಿಸಿ, ಆಚರಿಸೋಣ. ಸಮಸ್ತರಿಗೂ ದೀಪಾವಳಿಯ ಶುಭಕಾಮನೆಗಳು.