ಕಾಸರಗೋಡು: ಗ್ರಾಹಕರ ಖಾತೆಯಿಂದ ಹಣ ಕಡಿತಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸೌತ್ ಇಂಡಿಯನ್ ಬ್ಯಾಂಕ್ನ ಸೀತಾಂಗೋಳಿ ಶಾಖೆ ವಿರುದ್ಧ ದಾಖಲಾಗಿದ್ದ ದೂರಿನಲ್ಲಿ ಜಿಲ್ಲಾ ಗ್ರಾಹಕ ವ್ಯಾಜ್ಯ ಪರಿಹಾರ ಆಯೋಗವು ಗ್ರಾಹಕನ ಪರವಾಗಿ ತೀರ್ಪು ನೀಡಿದೆ. ಕಡಿತಗೊಳಿಸಿದ ಮೊತ್ತವನ್ನು ಮರುಪಾವತಿಸುವುದರ ಜೊತೆಗೆ, ಮಾನಸಿಕ ಯಾತನೆಗೆ ಪರಿಹಾರ ಹಾಗೂ ವ್ಯಾಜ್ಯದ ವೆಚ್ಚವನ್ನು ಪಾವತಿಸುವಂತೆ ಬ್ಯಾಂಕ್ಗೆ ಆಯೋಗ ಸೂಚಿಸಿದೆ.
ದೂರಿನ ಪ್ರಕಾರ, ರಾಜು ಸ್ಟೀಫನ್ ಡಿ’ಸೋಜಾ ಅವರು 2022ರಲ್ಲಿ ಸೀತಾಂಗೋಳಿಯ ಸೌತ್ ಇಂಡಿಯನ್ ಬ್ಯಾಂಕ್ ಶಾಖೆಯಲ್ಲಿ ಚಾಲ್ತಿ ಖಾತೆ ತೆರೆದಿದ್ದರು. ಬ್ಯಾಂಕ್ ನಿಗದಿಪಡಿಸಿದ್ದ ಕನಿಷ್ಠ ಮೊತ್ತವನ್ನು ಅವರು ನಿರಂತರವಾಗಿ ಕಾಯ್ದುಕೊಂಡಿದ್ದರು. ಆದರೆ, ಬ್ಯಾಂಕ್ ಅವರ ಖಾತೆಯಿಂದ ಎಸ್ಎಂಎಸ್ ಸೇವಾ ಶುಲ್ಕದ ಹೆಸರಿನಲ್ಲಿ ಹಣ ಕಡಿತಗೊಳಿಸಿತ್ತು.
ಈ ಕಡಿತದಿಂದ ಖಾತೆಯಲ್ಲಿದ್ದ ಮೊತ್ತವು ನಿಗದಿತ ಕನಿಷ್ಠ ಬಾಕಿಗಿಂತ ಕಡಿಮೆಯಾಗಿತ್ತು. ಪರಿಣಾಮವಾಗಿ, ಕನಿಷ್ಠ ಬಾಕಿ ಕಾಯ್ದುಕೊಳ್ಳದ ಕಾರಣಕ್ಕೆ ಬ್ಯಾಂಕ್ ದಂಡವನ್ನೂ ವಿಧಿಸಿತ್ತು. ಇದರಿಂದ ತಮಗೆ ಆರ್ಥಿಕ ನಷ್ಟವಾಗಿದ್ದು, ಅನಗತ್ಯ ಮಾನಸಿಕ ತೊಂದರೆ ಅನುಭವಿಸಬೇಕಾಯಿತು ಎಂದು ಆರೋಪಿಸಿ ಡಿ’ಸೋಜಾ ಅವರು ಗ್ರಾಹಕ ಆಯೋಗದ ಮೊರೆ ಹೋಗಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಆಯೋಗ, ಗ್ರಾಹಕರ ಖಾತೆಯಿಂದ ಯಾವುದೇ ಮೊತ್ತವನ್ನು ಕಡಿತಗೊಳಿಸುವ ಮೊದಲು ಅಥವಾ ನಂತರ ಅದರ ಬಗ್ಗೆ ಸ್ಪಷ್ಟ ಮಾಹಿತಿ ನೀಡುವುದು ಬ್ಯಾಂಕಿನ ಜವಾಬ್ದಾರಿ ಎಂದು ಅಭಿಪ್ರಾಯಪಟ್ಟಿದೆ.
ಎರಡೂ ಪಕ್ಷಗಳ ವಾದ ಆಲಿಸಿದ ಬಳಿಕ ಗ್ರಾಹಕನ ಪರವಾಗಿ ತೀರ್ಪು ನೀಡಿದ ಆಯೋಗ, ಖಾತೆಯಿಂದ ಕಡಿತಗೊಳಿಸಲಾದ ಮೊತ್ತವನ್ನು ಮರುಪಾವತಿಸುವಂತೆ ಹಾಗೂ ಮಾನಸಿಕ ಯಾತನೆಗೆ ಪರಿಹಾರ ಮತ್ತು ಪ್ರಕರಣದ ವ್ಯಾಜ್ಯ ವೆಚ್ಚವನ್ನು ಪಾವತಿಸುವಂತೆ ಸೌತ್ ಇಂಡಿಯನ್ ಬ್ಯಾಂಕ್ಗೆ ನಿರ್ದೇಶನ ನೀಡಿದೆ.















