ಉಡುಪಿ: ಭಾರತೀಯ ಜನತಾ ಪಾರ್ಟಿ ಉಡುಪಿ ಜಿಲ್ಲೆ ವತಿಯಿಂದ ಭಾರತೀಯ ಜನ ಸಂಘದ ಸಂಸ್ಥಾಪಕರಲ್ಲಿ ಒಬ್ಬರಾದ ಪಂಡಿತ್ ದಯಾಳ್ ಉಪಾಧ್ಯಾಯರವರ ಬಲಿದಾನ ದಿನವನ್ನು ಸಮರ್ಪಣಾ ದಿನವನ್ನಾಗಿ ಫೆ.11ರಂದು ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಅಧ್ಯಕ್ಷತೆಯಲ್ಲಿ ಜಿಲ್ಲಾ ಕಛೇರಿಯಲ್ಲಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಕುಯಿಲಾಡಿ, ದೇಶ ಸೇವೆಗೆ ತನ್ನ ಇಡೀ ಜೀವನವನ್ನು ಮುಡಿಪಾಗಿಟ್ಟು ಇಂದಿಗೂ ಕಾರ್ಯಕರ್ತರಿಗೆ ಸ್ಫೂರ್ತಿ ಹಾಗೂ ಪ್ರೇರಣಾ ಶಕ್ತಿಯಾಗಿರುವ ಪಂಡಿತ್ ದೀನದಯಾಳ್ ಉಪಾಧ್ಯಾಯರವರು ಅಜರಾಮರ. ಪಂಡಿತ್ ಜೀ ಅವರ ಜೀವನಾದರ್ಶ, ನಡೆದು ಬಂದ ದಾರಿ, ರಾಷ್ಟ್ರ ಸೇವೆಯಲ್ಲಿ ತಮ್ಮನ್ನು ಸಮರ್ಪಿಸಿಕೊಂಡ ರೀತಿ ದೇಶದ ಯುವಕರಿಗೆ ಎಂದಿಗೂ ದಾರಿ ದೀಪವಾಗಿದೆ. ಸದಾ ರಾಷ್ಟ್ರ ಹಿತದ ಚಿಂತನೆಯಲ್ಲಿದ್ದು, ಏಕಾತ್ಮ ಮಾನವತಾವಾದವನ್ನು ಪ್ರತಿಪಾದಿಸಿರುವ ಪಂಡಿತ್ ದೀನದಯಾಳ್ ಉಪಾಧ್ಯಾಯರವರು ಪ್ರಾತಃಸ್ಮರಣೀಯ ಮಹಾನ್ ಚೇತನ ಎಂದರು.
ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕೆ.ಉದಯ ಕುಮಾರ್ ಶೆಟ್ಟಿ ಮಾತನಾಡಿ ತ್ಯಾಗ ಮತ್ತು ಸಮರ್ಪಣೆಗೆ ಇನ್ನೊಂದು ಹೆಸರು ಪಂಡಿತ್ ದೀನದಯಾಳ್ ಉಪಾಧ್ಯಾಯರವರು, ಅವರ ತತ್ವಾದರ್ಶ, ಸಿದ್ಧಾಂತಗಳು ಪಕ್ಷ ಮತ್ತು ಪಕ್ಷದ ಕಾರ್ಯಕರ್ತರಿಗೆ ಸದಾ ಪ್ರೇರಣಾದಾಯಕವಾಗಿದೆ.
ಉನ್ನತ ಮಾನವೀಯ ಮತ್ತು ರಾಜಕೀಯ ಮೌಲ್ಯಗಳನ್ನು ಸಾರಿದ ಪಂಡಿತ್ ಜೀ ಯವರ ಉದಾತ್ತ ಚಿಂತನೆಗಳು ಸರ್ವ ಕಾಲಕ್ಕೂ ಪ್ರಸ್ತುತ ಎಂದರು.
ಪಂಡಿತ್ ದೀನದಯಾಳ್ ಉಪಾಧ್ಯಾಯರವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಪಕ್ಷದ ಚಟುವಟಿಕೆಗಳಿಗೆ ನಿಧಿ ಸಮರ್ಪಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳು, ಜಿಲ್ಲಾ ಪದಾಧಿಕಾರಿಗಳು, ಜಿಲ್ಲಾ ಮೋರ್ಚಾಗಳ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳು, ಜಿಲ್ಲಾ ಪ್ರಕೋಷ್ಠಗಳ ಸಂಚಾಲಕರು ಹಾಗೂ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.
ಬಿಜೆಪಿ ಜಿಲ್ಲಾ ಕಾರ್ಯಾಲಯ ಕಾರ್ಯದರ್ಶಿ ಸತ್ಯಾನಂದ ನಾಯಕ್ ಆತ್ರಾಡಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.