ಉಡುಪಿ: ಜಿಲ್ಲೆಯ ಗ್ರಾಮ ಪಂಚಾಯಿತಿ ಹಾಗೂ ವಾರ್ಡ್ಗಳನ್ನು ತಂಬಾಕು ಮುಕ್ತ ಪ್ರದೇಶವನ್ನಾಗಿಸಿ ಘೋಷಿಸಲು ಸಾರ್ವಜನಿಕರ ಸಹಭಾಗಿತ್ವದಲ್ಲಿ ಮುಂದಾಗಬೇಕೆoದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಅಧಿಕಾರಿಗಳಿಗೆ ಕರೆ ನೀಡಿದರು.
ಅವರು ಇಂದು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ತಂಬಾಕು ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ ಕೋಟ್ಪಾ-2003 ಕಾಯಿದೆಯ ಕುರಿತ ತ್ರೈಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ತಂಬಾಕು ಉತ್ಪನ್ನಗಳ ಸೇವನೆಯಿಂದ ಕ್ಯಾನ್ಸರ್, ಹೃದಯಾಘಾತಗಳಂತಹ ಮಾರಣಾಂತಿಕ ಕಾಯಿಲೆಗಳು ಉಂಟಾಗುತ್ತವೆ. ಸಾರ್ವಜನಿಕರು ತಂಬಾಕು ಉತ್ಪನ್ನಗಳಿಂದ ದೂರವಿದ್ದಾಗ ಮಾತ್ರ ಉತ್ತಮ ಆರೋಗ್ಯವನ್ನು ಹೊಂದಲು ಸಾಧ್ಯ. ಇದಕ್ಕೆ ಪ್ರತಿಯೊಬ್ಬರೂ ಒತ್ತು ನೀಡಬೇಕು ಎಂದರು.
ಜಿಲ್ಲೆಯಲ್ಲಿ ಕೆಲವು ಗ್ರಾಮ ಪಂಚಾಯತಿ, ಗ್ರಾಮಗಳು, ಬಹುಮಹಡಿ ವಸತಿ ಸಮುಚ್ಛಯಗಳು ತಂಬಾಕು ಮುಕ್ತ ಪ್ರದೇಶಗಳನ್ನಾಗಿ ಅಧಿಕೃತ ಘೋಷಣೆಗಳನ್ನು ಮಾಡಲಾಗಿದೆ. ಸಾರ್ವಜನಿಕರಲ್ಲಿ ಇವುಗಳ ಸೇವನೆಯಿಂದ ಉಂಟಾಗುವ ವ್ಯತಿರಿಕ್ತ ಪರಿಣಾಮದ ಬಗ್ಗೆ ಸಮುದಾಯಗಳಲ್ಲಿ ಜಾಗೃತಿಗೊಳಿಸಿ ಹೆಚ್ಚು ಹೆಚ್ಚು ಗ್ರಾಮ ಪಂಚಾಯತಿಗಳನ್ನು ಹಾಗೂ ವಾರ್ಡ್ಗಳನ್ನು ತಂಬಾಕು ಮುಕ್ತ ಪ್ರದೇಶವನ್ನಾಗಿಸಬೇಕೆಂದರು.
ಜಿಲ್ಲೆಯ ಶಾಲಾ ಕಾಲೇಜುಗಳ ನೂರು ಮೀಟರ್ ವ್ಯಾಪ್ತಿಯಲ್ಲಿ ತಂಬಾಕು ಉತ್ಪನ್ನಗಳ ಮಾರಾಟ ನಿಷೇಧವಿದೆ. ತಂಬಾಕು ಉತ್ಪನ್ನಗಳ ಮಾರಾಟಕ್ಕೆ ಸ್ಥಳೀಯ ಸಂಸ್ಥೆಗಳಿಂದ ತಂಬಾಕು ಮುಕ್ತ ಮಾರಾಟ ಪರವಾನಿಗೆಯನ್ನು ಕಡ್ಡಾಯವಾಗಿ ಪಡೆಯಬೇಕು. ಪರವಾನಿಗೆ ನೀಡುವ ಸಂದರ್ಭದಲ್ಲಿ ಅಂಗಡಿಯು ಶಾಲಾ ಪರಿಮಿತಿ ಸೇರಿದಂತೆ ಮತ್ತಿತರ ನಿಯಮಗಳು ಉಲ್ಲಂಘನೆಗಳಾಗುತ್ತಿದೇಯೇ ಎಂಬ ಬಗ್ಗೆ ಪರಿಶೀಲಿಸಿ, ಪರವಾನಿಗೆ ನೀಡಬೇಕೆಂದರು.
ಜಿಲ್ಲೆಯಲ್ಲಿ 33 ಕ್ಕೂ ಹೆಚ್ಚು ಧಿಡೀರ್ ದಾಳಿಗಳನ್ನು ನಡೆಸಿ, ಸೆಕ್ಷನ್ 4, ಸೆಕ್ಷನ್ 6(ಎ) ಹಾಗೂ 6(ಬಿ) ಅಡಿಯಲ್ಲಿ ಒಟ್ಟು 245 ಕ್ಕೂ ಹೆಚ್ಚು ಪ್ರಕರಣವನ್ನು ದಾಖಲಿಸಿಕೊಂಡು 70,000 ರೂ ದಂಡ ವಸೂಲಿ ಮಾಡಲಾಗಿದೆ.
ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿಯೂ ಸಹ ಕೋಟ್ಪಾ ಕಾಯಿದೆಯನ್ನು ಉಲ್ಲಂಘಿಸಿದ 31 ಪ್ರಕರಣಗಳಿಂದ 3,300 ರೂ. ದಂಡ ವಸೂಲಿ ಮಾಡಲಾಗಿದೆ ಎಂದ ಅವರು, ಜಿಲ್ಲೆಯಾದ್ಯಂತ ದಿಢೀರ್ ದಾಳಿಗಳನ್ನು ಹೆಚ್ಚು ನಡೆಸುವುದರೊಂದಿಗೆ ಕೋಟ್ಪಾ ಕಾಯಿದೆಯ ಉಲ್ಲಂಘನೆಯಾಗದಂತೆ ನೋಡಿಕೊಳ್ಳಬೇಕು ಎಂದರು.
ಸಭೆಯಲ್ಲಿ ಅಪರ ಪೊಲೀಸ್ ಅಧೀಕ್ಷಕ ಸುಧಾಕರ್ ನಾಯಕ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಬಸವರಾಜ್ ಹುಬ್ಬಳ್ಳಿ, ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಡಾ.ನಾಗರತ್ನ, ತಾಲೂಕು ಆರೋಗ್ಯಾಧಿಕಾರಿಗಳು, ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

















