ಖಾಸಗಿ ಅನುದಾನಿತ ಶಾಲಾ-ಕಾಲೇಜಿನ ಎಲ್ಲ ಸಿಬ್ಬಂದಿಗೂ ಪರಿಹಾರ ಘೋಷಿಸಿ: ಸಿದ್ದರಾಮಯ್ಯ

ಬೆಂಗಳೂರು: ಖಾಸಗಿ ಅನುದಾನಿತ ಶಾಲೆ-ಕಾಲೇಜುಗಳಲ್ಲಿ ಸರ್ಕಾರಿ ಸಂಬಳ ಪಡೆಯದೆ ದುಡಿಯುತ್ತಿರುವ ಎಲ್ಲ ಸಿಬ್ಬಂದಿಗೂ ಪರಿಹಾರ ಘೋಷಿಸಬೇಕು ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

ಕೊರೊನಾ ಮೊದಲ ಅಲೆಯಲ್ಲೂ ಅನುದಾನಿತ ಶಾಲೆ ಕಾಲೇಜುಗಳ ಸಿಬ್ಬಂದಿ ಬಹಳಷ್ಟು ಸಂಕಷ್ಟಕ್ಕೀಡಾಗಿದ್ದರು. ಆಗಲೂ ಸರ್ಕಾರ ಅವರ ನೆರವಿಗೆ ಬರಲಿಲ್ಲ. ಕಳೆದ ಒಂದೂವರೆ ವರ್ಷದಿಂದ ಸಂಬಳಗಳಿಲ್ಲದೆ ಈ ಕುಟುಂಬಗಳು ವಿಪರೀತ ಸಂಕಷ್ಟಕ್ಕೆ ಸಿಲುಕಿವೆ ಎಂದೂ ಹೇಳಿದ್ದಾರೆ.

ಖಾಸಗಿ ಅನುದಾನಿತ ಶಾಲಾ-ಕಾಲೇಜುಗಳ ಅತಿಥಿ ಶಿಕ್ಷಕರು ಬೀದಿ ಬದಿ ತರಕಾರಿ, ಹೂ, ಹಣ್ಣು ಮಾರಾಟ ಮಾಡುತ್ತಿರುವುದು, ನರೇಗಾ ಕೂಲಿ ಕೆಲಸಕ್ಕೆ ಹೋಗಿರುವ ಅಸಂಖ್ಯಾತ ಪ್ರಕರಣಗಳನ್ನು ಹಾಗೂ ಸಂಕಷ್ಟ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಗಳನ್ನು ಮಾಧ್ಯಮಗಳು ವರದಿ ಮಾಡಿವೆ. ಸಾಮಾಜಿಕ ತಾಣಗಳಲ್ಲಿ ಇವರು ತಮ್ಮ ಕಷ್ಟಗಳನ್ನು ಹೇಳಿಕೊಂಡಿದ್ದಾರೆ. ಇಷ್ಟಾದರೂ ಸರ್ಕಾರ ಅವರ ಕಡೆಗೆ ಗಮನ ಹರಿಸದಿರುವುದು ನಾಚಿಕೆಗೇಡಿನ ಸಂಗತಿ ಎಂದು ವಾಗ್ದಾಳಿ ನಡೆಸಿದರು.

ಅನುದಾನಿತ ಶಾಲೆ- ಕಾಲೇಜುಗಳಲ್ಲೂ ₹ 3 ಸಾವಿರದಿಂದ ₹ 5 ಸಾವಿರ ಮಾತ್ರ ಪಡೆದು ಕೆಲಸ ಮಾಡುವ ಸಾಕಷ್ಟು ಅತಿಥಿ ಶಿಕ್ಷಕರು, ಉಪನ್ಯಾಸಕರು, ಸಿಬ್ಬಂದಿ ಇದ್ದಾರೆ. ಬಹು ದೊಡ್ಡ ಸಂಖ್ಯೆಯಲ್ಲಿರುವ ಇವರನ್ನು ಸರ್ಕಾರದ ಪ್ಯಾಕೇಜ್‍ನಲ್ಲಿ ಸೇರಿಸದಿರುವುದು ನ್ಯಾಯಸಮ್ಮತವಲ್ಲ ಎಂದಿದ್ದಾರೆ.