ಬಡವರು ಹಾಗೂ ಮಧ್ಯಮ ವರ್ಗದ ಪ್ರತಿ ಕುಟುಂಬಕ್ಕೂ ಕನಿಷ್ಠ ಆದಾಯ ಘೋಷಿಸಿ: ರಾಕೇಶ್ ಬಿರ್ತಿ

ಉಡುಪಿ: ದೇಶದಾದ್ಯಂತ ಕೋವಿಡ್ ಎರಡನೆ ಅಲೆ ಭೀಕರತೆಯನ್ನು ಸೃಷ್ಟಿಸುತ್ತಿದ್ದು, ಇದರ ನಿಯಂತ್ರಣಕ್ಕೆ ಲಾಕ್ ಡೌನ್ ನಿರ್ಧಾರ ಸೂಕ್ತ. ಆದರೆ, ಇದರಿಂದ ಬಡವರು ಹಾಗೂ ಮಧ್ಯಮ ವರ್ಗದವರಿಗೆ ತುಂಬಾ ಆರ್ಥಿಕ ಹೊರೆ ಬೀಳಲಿದ್ದು, ಈ ಹಿನ್ನೆಲೆಯಲ್ಲಿ ಸರ್ಕಾರ ಪ್ರತಿ ಕುಟುಂಬಕ್ಕೂ ಕನಿಷ್ಠ ಆದಾಯ ಘೋಷಣೆ ಮಾಡಬೇಕು ಎಂದು ಸಾಮಾಜಿಕ‌ ಕಾರ್ಯಕರ್ತ ಎಂದು ರಾಕೇಶ್ ಬಿರ್ತಿ ಆಗ್ರಹಿಸಿದ್ದಾರೆ.

ಈ ಹಿಂದಿನ ಲಾಕ್ ಡೌನ್ ನಿಂದಾಗಿಯೇ ಇನ್ನೂ ಕೂಡ ಮಧ್ಯಮ ಮತ್ತು ಸಣ್ಣ ಪ್ರಮಾಣದ ಉದ್ಯಮಿಗಳು ಚೇತರಿಸಿಕೊಂಡಿಲ್ಲ. ಇದೀಗ ಅವರನ್ನು ಕೋವಿಡ್ ಎರಡನೇ ಅಲೆ ಮತ್ತಷ್ಟು ಸಂಕಷ್ಟಕ್ಕೆ ದೂಡಿದೆ ಎಂದಿದ್ದಾರೆ.

ಕೋವಿಡ್ ನಿಯಂತ್ರಣಕ್ಕೆ ಸರ್ಕಾರ ಅನೇಕ ಕಠಿಣ ನಿಯಮಗಳನ್ನು ಜಾರಿಗೊಳಿಸಿದೆ. ಇದೀಗ ಮತ್ತೆ ಲಾಕ್ ಡೌನ್ ಮಾದರಿಯಲ್ಲಿ ಬಿಗಿ ಕ್ರಮಕೈಗೊಂಡಿದ್ದು, ಇದು ಬಡವರು ಹಾಗೂ ಮಧ್ಯಮ ವರ್ಗದ ಜನರನ್ನು ಮತ್ತಷ್ಟು ಸಂಕಷ್ಟಕ್ಕೆ ತಳ್ಳಲಿದೆ. ಅವರು ಆರ್ಥಿಕ ಹೊರೆಯಿಂದ ಮತ್ತಷ್ಟು ಕಷ್ಟಗಳಿಗೆ ಸಿಲುಕುವ ಸಾಧ್ಯತೆ ಇದೆ.

ಹಾಗಾಗಿ ಸರ್ಕಾರ ಶೀಘ್ರವೇ ಬಡವರು ಹಾಗೂ ಮಧ್ಯಮ ವರ್ಗದ ಜನರಿಗೆ ಕನಿಷ್ಠ ಆದಾಯ ಪ್ಯಾಕೇಜ್ ಅನ್ನು ಘೋಷಣೆ ಮಾಡಬೇಕು. ಆ ಮೂಲಕ ಜನರನ್ನು ಆರ್ಥಿಕ ಸಂಕಷ್ಟದ ಜತೆಗೆ ಕೊರೊನಾ ಮಹಾಮಾರಿಯಿಂದ ರಕ್ಷಣೆ ಮಾಡಬೇಕಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.