ಕೇಂದ್ರ ಚುನಾವಣಾ ಆಯೋಗ ಪಂಚರಾಜ್ಯ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆ ಮಾಡಿದೆ. ಉತ್ತರ ಪ್ರದೇಶ, ಪಂಜಾಬ್, ಗೋವಾ, ಮಣಿಪುರ ಮತ್ತು ಉತ್ತರಾಖಂಡದ ವಿಧಾನಸಭಾ ಚುನಾವಣೆಯೂ 7 ಹಂತಗಳಲ್ಲಿ ನಡೆಯಲಿದೆ.
ಉತ್ತರ ಪ್ರದೇಶದಲ್ಲಿ ಫೆಬ್ರುವರಿ 10ರಿಂದ ಮಾರ್ಚ್ 7ರವರೆಗೆ 7 ಹಂತಗಳಲ್ಲಿ ಮತದಾನ ನಡೆಯಲಿದೆ. ಪಂಜಾಬ್, ಉತ್ತರಾಖಂಡ ಮತ್ತು ಗೋವಾದಲ್ಲಿ ಒಂದೇ ಹಂತದಲ್ಲಿ ಫೆಬ್ರುವರಿ 14 ರಂದು ಮತ್ತು ಮಣಿಪುರದಲ್ಲಿ ಫೆಬ್ರುವರಿ 27 ಮತ್ತು 3 ರಂದು ಮತದಾನ ನಡೆಯಲಿದೆ. ಮಾರ್ಚ್ 10 ರಂದು ಮತಗಳ ಎಣಿಕೆ ನಡೆಯಲಿದೆ.
ದೇಶದಲ್ಲೇ ಅತೀ ದೊಡ್ಡ ರಾಜ್ಯ ಉತ್ತರ ಪ್ರದೇಶ 403 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದೆ. ಗೋವಾ (40), ಪಂಜಾಬ್ (117), ಉತ್ತರಾಖಂಡ (70), ಮಣಿಪುರ (60) ರಾಜ್ಯಗಳ ವಿಧಾನಸಭೆ ಚುನಾವಣೆಯೂ ಹಲವು ಹಂತಗಳಲ್ಲಿ ನಡೆಯಲಿದೆ.
ಪಂಚರಾಜ್ಯ ಚುನಾವಣೆ ಸಂಬಂಧ ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಮುಖ್ಯ ಆಯುಕ್ತ ಸುಶೀಲ್ ಚಂದ್ರ ಅವರು, ಕೋವಿಡ್ ಮಾರ್ಗಸೂಚಿ ಪಾಲನೆಯೊಂದಿಗೆ ಎಲೆಕ್ಷನ್ ನಡೆಸುತ್ತೇವೆ ಎಂದರು. ಐದು ರಾಜ್ಯಗಳ 690 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಸಮಯಕ್ಕೆ ಸರಿಯಾಗಿ ಚುನಾವಣೆ ನಡೆಸುವುದು ಕರ್ತವ್ಯ. ಕೊರೊನಾ ಕಾರಣದಿಂದ ಚುನಾವಣೆ ನಡೆಸುವುದು ಸವಾಲಾಗಿದೆ ಎಂದು ಹೇಳಿದರು.