ಜಾಹೀರಾತು ನೀತಿ ಪರಿಷ್ಕರಣೆಗೆ ತೀರ್ಮಾನ: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ರಾಜ್ಯದಲ್ಲಿ ಶೀಘ್ರದಲ್ಲಿ ಹೊಸ ಜಾಹೀರಾತು ನೀತಿ ಜಾರಿಗೆ ತರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಬಿಜೆಪಿ ಸದಸ್ಯ ಡಿ.ಎಸ್‌.ಅರುಣ್‌ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಪ್ರಸ್ತುತ ಜಾಹೀರಾತು ಅನುಷ್ಠಾನ ನಿಯಮಗಳು ಜಾರಿಗೆ ಬಂದು 10 ವರ್ಷಗಳು ಪೂರ್ಣಗೊಂಡಿವೆ. ಈ ಹಿನ್ನೆಲೆಯಲ್ಲಿ ಜಾಹೀರಾತು ಅನುಷ್ಠಾನ ನಿಯಮಗಳನ್ನು ಪರಿಷ್ಕರಿಸಲು ಉದ್ದೇಶಿಸಲಾಗಿದೆ. ಪರಿಷ್ಕೃತ ಕರಡು ಜಾಹೀರಾತು ಅನುಷ್ಠಾನ ನಿಯಮಗಳನ್ನು ತಯಾರಿಸಲಾಗಿದ್ದು, ಸರ್ಕಾರದಲ್ಲಿ ಪರಿಶೀಲನೆ ಹಂತದಲ್ಲಿದೆ ಎಂದು ಹೇಳಿದರು.

ರಾಜ್ಯ ಸರ್ಕಾರ ಜಾರಿಗೆ ತರುವ ಯೋಜನೆಗಳು ಹಾಗೂ ಅಭಿವೃದ್ಧಿ ಕೆಲಸಗಳನ್ನು ಜನರಿಗೆ ತಿಳಿಸುವಂತೆ ಮಾಡುವುದು ಸರ್ಕಾರದ ಜವಾಬ್ದಾರಿ. ಆದ್ದರಿಂದ ರಾಜ್ಯ ಪ್ರಾದೇಶಿಕ ಮತ್ತು ಜಿಲ್ಲಾ ಪತ್ರಿಕೆಗಳ ಮೂಲಕ ಜಾಹೀರಾತುಗಳನ್ನು ಮತ್ತು ಶೇ.60:40 ಅನುಪಾತದಲ್ಲಿ ವಿಶೇಷ ಪುರವಣಿಗಳನ್ನು ಪ್ರಕಟಿಸಲಾಗುತ್ತದೆ ಎಂದು ಹೇಳಿದರು. ನಾವು ಜಾಹೀರಾತು ನೀಡಿರುವುದು ಜನ ಸಾಮಾನ್ಯರ ಕಲ್ಯಾಣಕ್ಕಾಗಿ ಜಾರಿಗೆ ತಂದಿರುವ ವಿವಿಧ ಯೋಜನೆಗಳು ಮತ್ತು ಕಾರ್ಯಕ್ರಮಗಳ ಕುರಿತಾಗಿ ಎಂದು ಸಿಎಂ ಹೇಳಿದರು.

ಜಾಹೀರಾತು ನೀಡುವ ಸಂಬಂಧ 2020-21 ಆರ್ಥಿಕ ವರ್ಷದಲ್ಲಿ 111.15 ಕೋಟಿ ರು, 2021-22 ರಲ್ಲಿ 86.08 ಕೋಟಿ ರು. 2022-23 ರಲ್ಲಿ 113.20 ಕೋಟಿ ರು, 2023-24 ರಲ್ಲಿ 101.38 ಕೋಟಿ ರು. ಹಾಗೂ ಅದರಲ್ಲಿ 29.46 ಕೋಟಿ ರು. ಹಿಂದಿನ ವರ್ಷದ ಬಾಕಿ ಪಾವತಿಸಲಾಗಿದೆ, 2024-25 ರಲ್ಲಿ 95.45 ಕೋಟಿ ರು. ವ್ಯಯಿಸಿಲಾಗಿದ್ದು, ಇದರಲ್ಲಿ ಹಿಂದಿನ ಸರ್ಕಾರದ ಬಾಕಿಗಳನ್ನು ಸಹ ಪಾವತಿಸಲಾಗಿದೆ ಎಂದರು. ವಿರೋಧ ಪಕ್ಷಗಳು ಆರೋಪಿಸುವಂತೆ ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ಕುಂಟಿತಗೊಂಡಿಲ್ಲ ಹಾಗೂ ಗ್ಯಾರಂಟಿ ಯೋಜನೆಗಳಿಂದ ಸರ್ಕಾರಕ್ಕೆ ಹಣದ ಕೊರತೆಯಾಗಿಲ್ಲ ಎಂದರು.