ಬೀಜಿಂಗ್: ಅಪಘಾತ ಅಥವಾ ತುರ್ತು ಸಂದರ್ಭಗಳಲ್ಲಿ ಕಾರಿನ ಬಾಗಿಲು ತೆರೆಯಲು ಸಾಧ್ಯವಾಗದೆ ಪ್ರಯಾಣಿಕರು ಸಿಲುಕಿಕೊಳ್ಳುವ ಆತಂಕದ ಹಿನ್ನೆಲೆಯಲ್ಲಿ ಟೆಸ್ಲಾ ಸೇರಿದಂತೆ 9 ಪ್ರಮುಖ ಕಾರು ಕಂಪನಿಗಳು ಚೀನಾ ಮಾರುಕಟ್ಟೆಯಿಂದ ಸುಮಾರು 43 ಲಕ್ಷ ವಾಹನಗಳನ್ನು ಹಿಂಪಡೆಯಲು ನಿರ್ಧರಿಸಿವೆ. ಚೀನಾದ ಆಟೋಮೊಬೈಲ್ ಇತಿಹಾಸದಲ್ಲೇ ಇದು ಅತಿ ದೊಡ್ಡ ಪ್ರಮಾಣದ ರೀಕಾಲ್ ಕಾರ್ಯಾಚರಣೆ ಎಂದು ವರದಿಯಾಗಿದೆ.
ಇವಿ ವಾಹನಗಳಲ್ಲಿ ಸಾಮಾನ್ಯವಾಗಿ ಬಳಸುವ ಮೆಕ್ಯಾನಿಕಲ್ ಎಮರ್ಜೆನ್ಸಿ ಡೋರ್-ರಿಲೀಸ್ ಹ್ಯಾಂಡಲ್‌ಗಳು ಅಪಘಾತದ ವೇಳೆ ಅಥವಾ ವಿದ್ಯುತ್ ಸಂಪರ್ಕ ಕಡಿತಗೊಂಡಾಗ ಪ್ರಯಾಣಿಕರು ಹಾಗೂ ರಕ್ಷಣಾ ಸಿಬ್ಬಂದಿಗೆ ತಕ್ಷಣ ಗೋಚರಿಸದಿರುವುದು ಮತ್ತು ಸುಲಭವಾಗಿ ಕಾರ್ಯನಿರ್ವಹಿಸದಿರುವ ಕುರಿತು ದೂರುಗಳು ಕೇಳಿಬಂದಿದ್ದವು.
ಕೆಲ ತಿಂಗಳ ಹಿಂದೆ ಶಿಯೋಮಿ SU7 ಕಾರು ಅಪಘಾತಕ್ಕೀಡಾಗಿ ಬೆಂಕಿ ಹೊತ್ತಿಕೊಂಡ ಸಂದರ್ಭದಲ್ಲಿ ಬಾಗಿಲು ತೆರೆಯಲು ಸಾಧ್ಯವಾಗದೆ ಚಾಲಕ ಮೃತಪಟ್ಟ ಘಟನೆ ಚೀನಾದಲ್ಲಿ ಭಾರಿ ಚರ್ಚೆಗೆ ಕಾರಣವಾಗಿತ್ತು. ಇದರ ಬೆನ್ನಲ್ಲೇ ಚೀನಾ ಸರ್ಕಾರ ವಾಹನಗಳ ಸುರಕ್ಷತಾ ನಿಯಮಗಳನ್ನು ಮತ್ತಷ್ಟು ಬಿಗಿಗೊಳಿಸಿದೆ.
ಯಾವ ಕಂಪನಿಗಳ ಎಷ್ಟು ಕಾರು ರೀಕಾಲ್?
ಟೆಸ್ಲಾ: ಸುಮಾರು 30 ಲಕ್ಷ ವಾಹನಗಳು — ಆಮದು ಮಾಡಿಕೊಳ್ಳಲಾದ ಹಾಗೂ ಚೀನಾದಲ್ಲಿ ನಿರ್ಮಿಸಲಾದ ಮಾಡೆಲ್ 3, ಮಾಡೆಲ್ ವೈ, ಮಾಡೆಲ್ ಎಸ್ ಮತ್ತು ಮಾಡೆಲ್ ಎಕ್ಸ್ ಕಾರುಗಳು. ರೀಕಾಲ್ ಪ್ರಕ್ರಿಯೆ ಸೆಪ್ಟೆಂಬರ್ 25ರಿಂದ ಆರಂಭವಾಗಲಿದೆ.
ಶಿಯೋಮಿ: ಸುಮಾರು 3.90 ಲಕ್ಷ ವಾಹನಗಳು.
ಲೀಪ್‌ಮೋಟರ್: ಸುಮಾರು 3.71 ಲಕ್ಷ ವಾಹನಗಳು.
ಎಕ್ಸ್‌ಪೆಂಗ್: ಸುಮಾರು 2.64 ಲಕ್ಷ ವಾಹನಗಳು.
ಇವುಗಳ ಹೊರತಾಗಿ ಗೀಲಿ ಸೇರಿದಂತೆ ಇತರ ಕಾರು ಕಂಪನಿಗಳೂ ಕಡಿಮೆ ಪ್ರಮಾಣದ ವಾಹನಗಳನ್ನು ಹಿಂಪಡೆಯುತ್ತಿವೆ.
ಸಾಫ್ಟ್‌ವೇರ್ ಅಪ್‌ಡೇಟ್ ಮೂಲಕ ಪರಿಹಾರ
ಅಪಘಾತ ಸಂಭವಿಸಿದ ತಕ್ಷಣ ವಾಹನದ ಕಿಟಕಿಗಳು ಸ್ವಯಂಚಾಲಿತವಾಗಿ ಕೆಳಗಿಳಿಯುವಂತೆ ಟೆಸ್ಲಾ ಸಾಫ್ಟ್‌ವೇರ್ ಅಪ್‌ಡೇಟ್ ನೀಡಲಿದೆ. ತುರ್ತು ಸಂದರ್ಭದಲ್ಲಿ ಬಾಗಿಲಿನ ಹ್ಯಾಂಡಲ್‌ಗಳನ್ನು ಸುಲಭವಾಗಿ ಗುರುತಿಸಲು ಸ್ಪಷ್ಟವಾದ ಎಚ್ಚರಿಕೆ ಲೇಬಲ್‌ಗಳು ಹಾಗೂ ಗುರುತುಗಳನ್ನು ಅಳವಡಿಸಲು ಇತರ ಕಂಪನಿಗಳೂ ಮುಂದಾಗಿವೆ.
ಈ ಪೈಕಿ ಹಲವು ಪರಿಹಾರಗಳನ್ನು ರಿಮೋಟ್ ಓವರ್-ದಿ-ಏರ್ (OTA) ಅಪ್‌ಡೇಟ್‌ಗಳ ಮೂಲಕ ನೀಡಬಹುದಾಗಿರುವುದರಿಂದ ಕಂಪನಿಗಳಿಗೆ ಸಮಯ ಹಾಗೂ ವೆಚ್ಚದ ಹೊರೆ ಕಡಿಮೆಯಾಗಲಿದೆ.
2027ರಿಂದ ‘ಹಿಡನ್ ಡೋರ್ ಹ್ಯಾಂಡಲ್’ಗೆ ನಿಷೇಧ?
ಟೆಸ್ಲಾ ಜನಪ್ರಿಯಗೊಳಿಸಿದ ಬಾಡಿಯೊಳಗೆ ಹುದುಗಿರುವ ‘ಹಿಡನ್’ ಅಥವಾ ‘ಕನ್ಸೀಲ್ಡ್ ಡೋರ್ ಹ್ಯಾಂಡಲ್’ ವಿನ್ಯಾಸವನ್ನು 2027ರಿಂದ ನಿಷೇಧಿಸಲು ಚೀನಾ ಸರ್ಕಾರ ಯೋಜಿಸಿದೆ ಎಂದು ವರದಿಯಾಗಿದೆ. ಇಂತಹ ವಿನ್ಯಾಸದ ಮೇಲೆ ಇಂಥ ಕ್ರಮ ಕೈಗೊಳ್ಳುತ್ತಿರುವ ಮೊದಲ ದೇಶ ಚೀನಾ ಆಗಲಿದೆ.
ಇತ್ತ ಅಮೆರಿಕದ ನ್ಯಾಷನಲ್ ಹೈವೇ ಟ್ರಾಫಿಕ್ ಸೇಫ್ಟಿ ಅಡ್ಮಿನಿಸ್ಟ್ರೇಷನ್ (NHTSA) ಕೂಡ ಎಲೆಕ್ಟ್ರಾನಿಕ್ ಡೋರ್ ಹ್ಯಾಂಡಲ್‌ಗಳ ಸುರಕ್ಷತೆ ಕುರಿತು ಹೊಸ ಮಾನದಂಡಗಳನ್ನು ರೂಪಿಸುವ ಬಗ್ಗೆ ಪರಿಶೀಲನೆ ನಡೆಸುತ್ತಿದೆ.















