ಶಾಲಾ ಪಠ್ಯಪುಸ್ತಕ ಪರಿಷ್ಕರಣೆ ಕುರಿತು ವರದಿ ಪರಿಶೀಲಿಸಿ ಶೀಘ್ರ ತೀರ್ಮಾನ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಉಡುಪಿ: ಶಾಲಾ ಪಠ್ಯಪುಸ್ತಕ ಪರಿಷ್ಕರಣೆಯ ವರದಿಯನ್ನು ಪರಿಶೀಲಿಸಿದ ಬಳಿಕ ಶೀಘ್ರದಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಬುಧವಾರ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ 8 ನೇ ವರ್ಷಾಚರಣೆ ಅಂಗವಾಗಿ ಉಡುಪಿ ಜಿಲ್ಲಾ ಭಾರತೀಯ ಜನತಾ ಪಕ್ಷದ ವತಿಯಿಂದ ಆಯೋಜಿಸಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ಶಾಲಾ ಪಠ್ಯಪುಸ್ತಕ ಪರಿಷ್ಕರಣೆಗೆ ಸಂಬಂಧಿಸಿದಂತೆ ಈಗಾಗಲೇ ಪುಸ್ತಕದಲ್ಲಿರುವ ಪಾಠಗಳನ್ನು ತೆಗೆಯುವಂತೆ ಕೆಲ ಸಾಹಿತಿಗಳು ಹೇಳುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಬೊಮ್ಮಾಯಿ, ಪಠ್ಯಪುಸ್ತಕ ಪರಿಷ್ಕರಣೆಯ ಬಗ್ಗೆ ಸಮಗ್ರ ವರದಿಯನ್ನು ಕೇಳಲಾಗಿದೆ. ಸ್ವಾಮೀಜಿಗಳು ಹಾಗೂ ಇತರರ ಅಭಿಪ್ರಾಯಗಳನ್ನು ಪರಿಗಣಿಸಲಾಗುವುದು. ಈ ಎಲ್ಲ ವಿಚಾರಗಳ ಬಗ್ಗೆ ಸಮಗ್ರ ವರದಿ ಹಾಗೂ ವಾಸ್ತವಾಂಶವನ್ನು ತಿಳಿಸುವಂತೆ ಶಿಕ್ಷಣ ಸಚಿವರಿಗೆ ಸೂಚನೆ ನೀಡಲಾಗಿದೆ. ಈ ಬಗ್ಗೆ ವರದಿ ಪಡೆದು, ಪರಿಶೀಲಿಸಿದ ನಂತರ ಸೂಕ್ತ ತೀರ್ಮಾನವನ್ನು ಕೈಗೊಳ್ಳಲಾಗುವುದು. ನಾಳೆ ವರದಿ ದೊರೆಯಲಿದ್ದು ಪಠ್ಯಗಳನ್ನು ವಾಪಸ್ಸು ಪಡೆಯುತ್ತೇವೆ ಎನ್ನುವ ಸಾಹಿತಿಗಳೊಂದಿಗೆ ಈ ಬಗ್ಗೆ ಚರ್ಚಿಸಲಾಗುವುದು ಎಂದರು.

ಎಸಿಬಿ ಈಗಾಗಲೇ ಬಲವರ್ಧನೆಯಾಗಿದೆ. ಲೋಕಾಯುಕ್ತ ಇದ್ದರೂ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಪ್ರಕರಣ ದಾಖಲಿಸಲು ಸಾಧ್ಯವಾಗುತ್ತಿರಲಿಲ್ಲ. ಆದರೆ ಎಸಿಬಿಗೆ ಆ ಅಧಿಕಾರವಿದೆ ಎಂದರು.

ಕರಾವಳಿ ಭಾಗದಲ್ಲಿ ಲವ್ ಜಿಹಾದ್ ಮತ್ತೊಮ್ಮೆ ಸದ್ದುಮಾಡುತ್ತಿರುವ ಬಗ್ಗೆ ಪ್ರತಿಕ್ರಿಯಿಸಿ, ಇದಕ್ಕಾಗಿ ಕಾನೂನು ರೂಪಿಸಲಾಗಿದ್ದು ಯಾರೂ ಕೂಡಾ ಕಾನೂನು ಉಲ್ಲಂಘನೆ ಮಾಡುವಂತಿಲ್ಲ ಎಂದರು.