ತಿಂಗಳೊಳಗೆ 2 ಸಾವಿರಕ್ಕೂ ಅಧಿಕ ವೈದ್ಯರು, 800 ಮಂದಿ ಪ್ಯಾರಾ ಮೆಡಿಕಲ್, ನರ್ಸಿಂಗ್ ಸ್ಟಾಫ್ ಗಳ ನೇರ ನೇಮಕಾತಿಗೆ ನಿರ್ಧಾರ: ಸಚಿವ ಡಾ. ಸುಧಾಕರ್

ಉಡುಪಿ: ರಾಜ್ಯದಲ್ಲಿ‌ ಆರೋಗ್ಯ ಸೇವೆಯನ್ನು ಬಲಪಡಿಸುವ ಉದ್ದೇಶದಿಂದ ಒಂದು ತಿಂಗಳೊಳಗೆ 2 ಸಾವಿರಕ್ಕೂ ಅಧಿಕ ವೈದ್ಯರನ್ನು ಹಾಗೂ 700ರಿಂದ 800 ಮಂದಿ ಪ್ಯಾರಾ ಮೆಡಿಕಲ್ , ಲ್ಯಾಬ್ ಟೆಕ್ನಿಷನ್ ಹಾಗೂ ನರ್ಸಿಂಗ್ ಸ್ಟಾಫ್ ಗಳನ್ನು ನೇರ ನೇಮಕಾತಿ ಮೂಲಕ ತೆಗೆದುಕೊಳ್ಳಲು ನಿರ್ಧರಿಸಲಾಗಿದೆ ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಹೇಳಿದರು.

ಉಡುಪಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಇಂದು ನಡೆದ ಸಭೆಯಲ್ಲಿ ಮಾತನಾಡಿದರು.

ಗ್ರಾಮೀಣ ಪ್ರದೇಶದಲ್ಲಿ ವಾಸಿಸುವ ಶೇ. 70ರಷ್ಟು ಮಂದಿಗೆ ಗುಣಮಟ್ಟದ ಆರೋಗ್ಯ ಸೇವೆಗಳು ಸಿಗುತ್ತಿಲ್ಲ. ಗ್ರಾಮೀಣ ಪ್ರದೇಶದಲ್ಲಿ ಯುವ ವೈದ್ಯರು ಕೆಲಸ ಮಾಡಲು ಹಿಂದೇಟು ಹಾಕುತ್ತಿರುವುದು ಇದಕ್ಕೆ ಪ್ರಮುಖ ಕಾರಣ. ಹಾಗಾಗಿ ಗ್ರಾಮೀಣ ಪ್ರದೇಶದಲ್ಲಿ ವೈದ್ಯಕೀಯ ಸೇವೆಗಳನ್ನು ಹೆಚ್ಚಿಸುವ ಸಲುವಾಗಿ ಗ್ರಾಮೀಣ ಭಾಗದಲ್ಲಿ ಬಂದು ಕೆಲಸ ಮಾಡಲು ಇಚ್ಛಿಸುವ ವೈದ್ಯರಿಗೆ ಆರ್ಥಿಕ ಪ್ಯಾಕೇಜ್, ವೇತನ ಹೆಚ್ಚಳ ಹಾಗೂ ಭಡ್ತಿಯನ್ನು ಕೂಡಲೇ ನೀಡಲು ತೀರ್ಮಾನ ಮಾಡಲಾಗುತ್ತಿದೆ. ಈ ನಿಟ್ಟಿನಲ್ಲಿ ಕಾನೂನಿನಲ್ಲೂ ಸಹ ಕೆಲ ಬದಲಾವಣೆ ಮಾಡುತ್ತಿದ್ದೇವೆ ಎಂದರು.

ರಾಜ್ಯದ ನಾಲ್ಕು ಜಿಲ್ಲಾ ಕೇಂದ್ರಗಳಲ್ಲಿ‌ ನೂತನ ವೈದ್ಯಕೀಯ ಕಾಲೇಜುಗಳ ನಿರ್ಮಾಣ ಆರಂಭವಾಗಿದೆ. ದೇಶದಲ್ಲಿ 157 ವೈದ್ಯಕೀಯ ಕಾಲೇಜುಗಳ ನಿರ್ಮಾಣವಾಗುತ್ತಿದ್ದು, ಇದೆಲ್ಲವೂ ಆರಂಭವಾದರೆ ಹೊಸದಾಗಿ 27 ಸಾವಿರ ವಿದ್ಯಾರ್ಥಿಗಳು ಎಂಬಿಬಿಎಸ್ ಗೆ ಪ್ರವೇಶ ಪಡೆಯುವಂತಹ ಕೆಲಸ ಈ ದೇಶದಲ್ಲಿ ಆಗಲಿದೆ ಎಂದರು.

ರಾಜ್ಯದಲ್ಲಿ ಕೋವಿಡ್ ಎರಡನೇ ಅಲೆ ಹೆಚ್ಚುತ್ತಿದ್ದು, ಇದನ್ನು ನಿಯಂತ್ರಿಸಲು ಸರ್ಕಾರ ಅಗತ್ಯ ಕ್ರಮ ಕೈಗೊಂಡಿದೆ. ಅದರ ಜತೆಗೆ ಸಾರ್ವಜನಿಕರ ಸಹಕಾರವೂ ಅಗತ್ಯ. ಎ. 1ರಿಂದ 45 ವರ್ಷ ಮೇಲ್ಪಟ್ಟ ಎಲ್ಲರೂ ಕೋವಿಡ್ ಲಸಿಕೆಗಳನ್ನು‌ ತೆಗೆದುಕೊಳ್ಳಬೇಕು. ಆ ಮೂಲಕ‌ ರಾಜ್ಯವನ್ನು ಕೋವಿಡ್ ಸೋಂಕಿನಿಂದ ಸಂಪೂರ್ಣವಾಗಿ ಮುಕ್ತವಾಗಿಸಲು ಸಹಕಾರ ನೀಡಬೇಕು ಎಂದು ಹೇಳಿದರು.

ಪ್ರತಿದಿನ ಮೂರು ಲಕ್ಷ ಲಸಿಕೆ ನೀಡುವ ಸಾಮರ್ಥ್ಯ ನಮ್ಮಲ್ಲಿದೆ. ಹಾಗಾಗಿ ಜನರು ಸ್ವಯಂ ಪ್ರೇರಿತರಾಗಿ ಈ ಲಸಿಕೆಗಳನ್ನು ಪಡೆಯಬೇಕು. ಹಾಗೆ ಕೋವಿಡ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಮುಂದಿನ ಎಂಟು ವಾರಗಳ ಕಾಲ ಸ್ವಯಂ ನಿರ್ಬಂಧ ಹಾಕಿಕೊಳ್ಳಬೇಕು. ಆಗ ಕೋವಿಡ್ ಎರಡನೇ ಅಲೆಯನ್ನು ಯಶಸ್ವಿಯಾಗಿ ನಿಯಂತ್ರಣ ಮಾಡಲು ಸಾಧ್ಯ ಎಂದರು.