ಡಿ.21ರಿಂದ 27: ಮೂಡಬಿದಿರೆಯಲ್ಲಿ ಸ್ಕೌಟ್ಸ್ ಅಂಡ್ ಗೈಡ್ಸ್‌ ಅಂತಾರಾಷ್ಟ್ರೀಯ ಜಾಂಬೂರಿ, ಇಲ್ಲಿದೆ ಆಮಂತ್ರಣ

ಮಂಗಳೂರು: ನಾಳೆಯಿಂದ ಒಂದು ವಾರಗಳ ಕಾಲ (ಡಿಸೆಂಬರ್‌ 21ರಿಂದ 27) ಮೂಡಬಿದಿರೆಯ ಆಳ್ವಾಸ್‌ ಆವರಣದಲ್ಲಿ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿ ನಡೆಯಲಿದೆ. ನಾಳೆ ಅಲ್ಲಿನ ವಿವಿಧ ವೇದಿಕೆಗಳಲ್ಲಿ ಹಲವು ಕಾರ್ಯಕ್ರಮಗಳು ನಡೆಯಲಿವೆ. ಈ ಜಾಂಬೂರಿಯಲ್ಲಿ 50,000 ಸ್ಕೌಟ್ಸ್ ಹಾಗೂ ಗೈಡ್ ಗಳು ಸೇರಿದಂತೆ ಒಟ್ಟು 63,000 ಮಂದಿ ಭಾಗವಹಿಸಲಿದ್ದಾರೆ.

10 ದೇಶಗಳಿಂದ 10,000 ಮಂದಿ ತರಬೇತಿ ನೀಡುವವರು ಹಾಗೂ 3,000 ಮಂದಿ ಸ್ವಯಂ ಸೇವಕರು ಕಾರ್ಯಕ್ರಮದಲ್ಲಿ ಭಾಗಿಯಾಗುವ ನಿರೀಕ್ಷೆ ಇದೆ. ದೇಶದಲ್ಲಿ ಇಂತಹ ಕಾರ್ಯಕ್ರಮ ನಡೆಯುವುದು ಇದೇ ಮೊದಲು ಎನ್ನಲಾಗಿದೆ.

ಡಾ.ವಿ.ಎಸ್‌. ಆಚಾರ್ಯ ಸಭಾಂಗಣದಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ, ತಬಲ ಪಂಚಕ, ದ್ವಂದ್ವ ಪಿಟೀಲು ವಾದನ, ಕನ್ನಡ ಹಾಸ್ಯ, ಹಿಂದೂಸ್ತಾನಿ ಗಾಯನ, ಗೆಜ್ಜೆ ಹೆಜ್ಜೆ, ನರ್ತನ ವೈವಿಧ್ಯ ನಡೆಯಲಿದೆ. ನುಡಿಸಿರಿ ವೇದಿಕೆಯಲ್ಲಿ ಲಘು ಶಾಸ್ತ್ರೀಯ ಸಂಗೀತ, ಕರ್ನಾಟಕ ಶಾಸ್ತ್ರೀಯ ಗಾಯನ, ಭಜನ ಕುಸುಮ, ಕರ್ನಾಟನ ಶಾಸ್ತ್ರೀಯ ಗಾಯನ ನಾಟ್ಯ ಸಿಂಚನ ಇತ್ಯಾದಿ ಕಾರ್ಯಕ್ರಮಗಳು ನಡೆಯಲಿವೆ. ಪ್ಯಾಲೇಸ್‌ ಗ್ರೌಂಡ್‌ನಲ್ಲಿ ಕನ್ನಡ ಡಿಂಡಿಮ ಕಾರ್ಯಕ್ರಮ ನಡೆಯಲಿದೆ.

ಕೃಷಿಸಿರಿ ವೇದಿಕೆಯಲ್ಲಿ ಶಹನಾಯ್‌ ಗಾಯನ, ರಂಗಗೀತೆ, ಬಡಗುತಿಟ್ಟು-ಯಕ್ಷಗಾನ ಸಿರಿ, ತುಳಹಾಸ್ಯ, ಪುನೀತ್‌ ನಮನ ಕಾರ್ಯಕ್ರಮಗಳು ನಡೆಯಲಿವೆ. ಕೆ.ವಿ. ಸುಬ್ಬಣ್ಣ ಬಯಲು ರಂಗಮಂದಿರದಲ್ಲಿ ಸುಗಮ ಸಂಗೀತ ವೈಭವ ನಡೆಯಲಿದೆ. ನಾಳೆ ಮತ್ತು ಮುಂದಿನ ದಿನಗಳ ಕಾರ್ಯಕ್ರಮಗಳ ಮಾಹಿತಿಯನ್ನು ಈ ಮುಂದಿನ ಆಮಂತ್ರಣ ಪತ್ರಿಕೆಯಿಂದ ಪಡೆದುಕೊಳ್ಳಬಹುದು.

“ಈ ಜಾಂಬೂರಿಯಲ್ಲಿ ಮಕ್ಕಳ ಬೆಳವಣಿಗೆಗೆ ಪೂರಕವಾದ ಮೇಳಗಳು ಇರಲಿವೆ. ಕೃಷಿ ಮೇಳ, ವಿಜ್ಞಾನ ಮೇಳ, ಆಹಾರ ಮೇಳ ಸೇರಿದಂತೆ ವಿವಿಧ ಮೇಳಗಳು ಇರಲಿವೆ. ಸುಮಾರು ಏಳು ಎಕರೆ ಪ್ರದೇಶದಲ್ಲಿ ಈ ಮೇಳ ನಡೆಯಲಿದೆ. 42 ಬಗೆಯ ಸಾಹಸ ಕಸರತ್ತುಗಳು ಇರಲಿವೆ. ತೋಟಗಾರಿಕಾ ಬೆಳೆಗಳು, ತರಕಾರಿ ಬೆಳೆಗಳು, ವೈವಿಧ್ಯಮಯ ಭತ್ತದ ತಳಿಗಳನ್ನು ಪರಿಚಯಿಸಲಾಗುವುದು. ಅಂತಾರಾಷ್ಟ್ರೀಯ ಮಟ್ಟದ ಪುಸ್ತಕಗಳ ಪ್ರದರ್ಶನ ಮತ್ತು ಮಾರಾಟವಿದೆʼʼ ಎಂದು ಡಾ ಎಂ. ಮೋಹನ್ ಆಳ್ವ ಮಾಹಿತಿ ನೀಡಿದ್ದಾರೆ.

ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಈ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, 100 ಎಕರೆಯ ವ್ಯಾಪ್ತಿಯಲ್ಲಿರುವ ಆಳ್ವಾಸ್ ಕ್ಯಾಂಪಸ್ ನಲ್ಲಿ ಈ ಕಾರ್ಯಕ್ರಮ ನಡೆಯುತ್ತಿದ್ದು, ವಿದ್ಯಾರ್ಥಿಗಳಿಗೆ ಪಶ್ಚಿಮ ಘಟ್ಟ ಹಾಗೂ ಇತರ ಅಂಶಗಳನ್ನು ತಿಳಿಸುವುದಕ್ಕೆ ಜಂಗಲ್ ಟ್ರಯಲ್ ಗಾಗಿ ಅರಣ್ಯ ಪ್ರದೇಶವನ್ನು ಸಿದ್ಧಗೊಳಿಸಲಾಗಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ನಾಡಿನ ಗಣ್ಯರು, ನಮ್ಮ ಎಲ್ಲಾ ಸಂಸದರು, ಶಾಸಕರು ಪಾಲ್ಗೊಳ್ಳಲಿದ್ದಾರೆ. ಉದ್ಘಾಟನೆಯ ವೇಳೆ ಆಕರ್ಷಕ ಪಥಸಂಚಲನ ನಡೆಯಲಿದೆ. ದೇಶದ ನಾನಾ ರಾಜ್ಯಗಳ ಸಾವಿರಾರು ಕಲಾವಿದರು ದೇಶದ ಸಂಸ್ಕೃತಿ ಮತ್ತು ಪರಂಪರೆಯ ಅನಾವರಣ ಮಾಡಲಿದ್ದಾರೆ ಎಂದು ಡಾ ಎಂ. ಮೋಹನ್ ಆಳ್ವ ಹೇಳಿದ್ದಾರೆ.

ಸುಮಾರು ಐವತ್ತು ಸಾವಿರಕ್ಕೂ ಹೆಚ್ಚು ಜನರು ಕುಳಿತು ವೀಕ್ಷಿಸಬಹುದಾದ ಬೃಹತ್‌ ಬಯಲು ರಂಗಮಂಟಪ, ವೇದಿಕೆ ಸಿದ್ಧಪಡಿಸಲಾಗಿದೆ. ಸುಮಾರು ಹತ್ತು ಸಾವಿರ ವಿದ್ಯಾರ್ಥಿಗಳು ಏಕಕಾಲದಲ್ಲಿ ಯೋಗ ಮತ್ತು ಧ್ಯಾನ ನಡೆಸಲಿದ್ದಾರೆ. ಶಂಕರ ಮಹಾದೇವನ್‌, ವಿಜಯ್‌ ಪ್ರಕಾಶ್‌ ಸೇರಿದಂತೆ ಖ್ಯಾತ ಸಂಗೀತ ಕಲಾವಿದರ ಸಾಂಸ್ಕೃತಿಕ ವೈವಿಧ್ಯ ಕಾರ್ಯಕ್ರಮಗಳು ನಡೆಯಲಿವೆ.