ಡಿ.24 ಕ್ಕೆ ಬಸ್ರೂರು ಅಪ್ಪಣ್ಣ ಹೆಗ್ಡೆ ಅವರ 85 ರ ಸಂಭ್ರಮ.

ಕುಂದಾಪುರ: ಜಿಲ್ಲೆಯ ಹಿರಿಯ ಧಾರ್ಮಿಕ ಮುಖಂಡ, ಮಾಜಿ ಶಾಸಕ ಬಸ್ರೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಧರ್ಮದರ್ಶಿಯಾಗಿರುವ ಬಿ.ಅಪ್ಪಣ್ಣ ಹೆಗ್ಡೆಯವರಿಗೆ ೮೫ ವರ್ಷಗಳು ತುಂಬುತ್ತಿದ್ದು, ಇದರ ಅಂಗವಾಗಿ ಡಿ.೨೪ ರಂದು ಬಸ್ರೂರು ಶ್ರೀ ಶಾರದಾ ಕಾಲೇಜಿನ ಬಯಲು ರಂಗ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿರುವ ಜನ್ಮ ದಿನಾಚರಣೆ ಕಾರ್ಯಕ್ರಮದ ಅಂಗವಾಗಿ ಪ್ರಶಸ್ತಿ ಪ್ರದಾನ ಹಾಗೂ ಅಶಕ್ತರಿಗೆ ದತ್ತಿನಿಧಿ ವಿತರಣೆ ಮಾಡಲಾಗುವುದು ಎಂದು ಬಸ್ರೂರು ಅಪ್ಪಣ್ಣ ಹೆಗ್ಡೆ ಪ್ರತಿಷ್ಠಾನದ ಅಧ್ಯಕ್ಷ ರಾಮಕಿಶನ್ ಹೆಗ್ಡೆ ಶುಕ್ರವಾರ ಬಸ್ರೂರಿನಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಕಳೆದ ೧೦ ವರ್ಷಗಳಿಂದ ಸಾಮಾಜಿಕ ಕಳಕಳಿಯ ಉದ್ದೇಶದೊಂದಿಗೆ ಸ್ಥಾಪನೆಯಾಗಿರುವ ಬಸ್ರೂರು ಅಪ್ಪಣ್ಣ ಹೆಗ್ಡೆ ಪ್ರತಿಷ್ಠಾನ ದಶಮಾನೋತ್ಸವದ ಸಂಭ್ರಮಾಚರಣೆಯ ಹೊಸ್ತಿಲಲ್ಲಿ ಇರುವುದರಿಂದ ಅಪ್ಪಣ್ಣ ಹೆಗ್ಡೆಯವರ ೮೫ ನೇ ಹುಟ್ಟು ಹಬ್ಬದ ಆಚರಣೆಯನ್ನು ವಿಶಿಷ್ಠವಾಗಿ ಆಚರಿಸಲು ಸಿದ್ದತೆಯನ್ನು ನಡೆಸಲಾಗಿದೆ.

ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವಾ ಅವರಿಗೆ ಬಸ್ರೂರು ಅಪ್ಪಣ್ಣ ಹೆಗ್ಡೆ ಪ್ರಶಸ್ತಿಯನ್ನು ನೀಡಲಾಗುವುದು. ಶ್ರೀ ಕ್ಷೇತ್ರ ಹೊರನಾಡಿನ ಧರ್ಮಕರ್ತರಾದ ಡಾ.ಜಿ .ಭೀಮೇಶ್ವರ ಜೋಷಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಮಾಜಿ ಸಚಿವ ಕೆ ಅಮರನಾಥ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಶ್ರೀ ಕ್ಷೇತ್ರ ಧರ್ಮಸ್ಥಳದ ಆಡಳಿತ ಮಂಡಳಿಯ ಸದಸ್ಯ ಡಿ.ಹರ್ಷೇಂದ್ರಕುಮಾರ್ ಮುಖ್ಯ ಅಭ್ಯಾಗತರಾಗಿರಲಿದ್ದಾರೆ. ಸಭಾ ಕಾರ್ಯಕ್ರಮದ ಬಳಿಕ ಆಳ್ವಾಸ್ ವಿದ್ಯಾರ್ಥಿಗಳಿಂದ ಆಳ್ವಾಸ್ ಸಾಂಸ್ಕೃತಿಕ ವೈಭವ ನಡೆಯಲಿದೆ. ಕಾರ್ಯಕ್ರಮದಲ್ಲಿ ಅಂದಾಜು ೫,೦೦೦ ಮಂದಿ ಭಾಗವಹಿಸುವ ನಿರೀಕ್ಷೆ ಇದೆ ಎಂದರು.

ಬಸ್ರೂರು ಅಪ್ಪಣ್ಣ ಹೆಗ್ಡೆ ಪ್ರತಿಷ್ಠಾನದ ವತಿಯಿಂದ ಅನಾರೋಗ್ಯ ಹೊಂದಿರುವವರಿಗೆ ಹಾಗೂ ಅರ್ಹ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ದತ್ತಿನಿಧಿಯನ್ನು ವಿತರಿಸಲಾಗುವುದು. ಮುಂದಿನ ದಿನಗಳಲ್ಲಿ ಆರ್ಥಿಕ ಸಮಸ್ಯೆಯಿಂದಾಗಿ ಆಸ್ಪತ್ರೆಗಳಲ್ಲಿ ಸರಿಯಾದ ಚಿಕಿತ್ಸೆಯನ್ನು ಪಡೆಯಲಾಗದೆ ಬಳಲುತ್ತಿರುವವರನ್ನು ಗುರುತಿಸಿ ಆಸ್ಪತ್ರೆಗೆ ನೇರವಾಗಿ ಆರ್ಥಿಕ ನೆರವು ನೀಡುವ ನಿಟ್ಟಿನಲ್ಲಿ ಸಂಸ್ಥೆ ಕಾರ್ಯೋನ್ಮುಖವಾಗಲಿದೆ ಎಂದರು.

ಸುದ್ದಿ ಗೋಷ್ಠಿಯಲ್ಲಿ ಬಾಂಡ್ಯ ಸುಭಾಶ್ಚಂದ್ರ ಶೆಟ್ಟಿ, ಅನುಪಮಾ ಎಸ್ಶೆಟ್ಟಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗರಾಜ ಗಾಣಿಗ, ಶಾರದಾ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಕೆ.ರಾಧಾಕೃಷ್ಣ ಶೆಟ್ಟಿ ಇದ್ದರು.