ಅತ್ಯಾಚಾರಕ್ಕೊಳಗಾದ ಯುವತಿ ಸಾವು: ಪೊಲೀಸರಿಂದ ರಾತ್ರೋರಾತ್ರಿ ಶವ ಸಂಸ್ಕಾರ

ನವದೆಹಲಿ: ಕಳೆದ 15 ದಿನಗಳ ಹಿಂದೆ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿ ದೆಹಲಿ ಆಸ್ಪತ್ರೆಯಲ್ಲಿ ಮಂಗಳವಾರ ಮೃತಪಟ್ಟಿದ್ದ ಉತ್ತರ ಪ್ರದೇಶದ 19 ವರ್ಷದ ಯುವತಿಯ ಅಂತ್ಯ ಸಂಸ್ಕಾರವನ್ನು ಪೊಲೀಸರು ಮನೆಯವರಿಗೂ ತಿಳಿಸದೆ ರಾತ್ರೋರಾತ್ರಿ ಮಾಡಿ ಮುಗಿಸಿದ್ದಾರೆ ಎಂದು ತಿಳಿದುಬಂದಿದೆ.

ಪೊಲೀಸರು ಯುವತಿಯ ಪೋಷಕರು, ಸಂಬಂಧಿಕರನ್ನು ಮನೆಯಲ್ಲಿಯೇ ಕೂಡಿಹಾಕಿದ್ದಾರೆ ಎನ್ನಲಾಗಿದೆ. ರಾತ್ರಿಯಲ್ಲಿ ಸೆರೆಹಿಡಿಯಲಾದ ದೃಶ್ಯಗಳಲ್ಲಿ ಕುಟುಂಬವು ಪೊಲೀಸರೊಂದಿಗೆ ವಾದಿಸುತ್ತಿದ್ದು, ಯುವತಿಯ ಮೃತ ದೇಹವನ್ನು ಕೊಂಡೊಯ್ಯುವಾಗ ಮಹಿಳಾ ಸಂಬಂಧಿಕರನ್ನು ಪಕ್ಕಕ್ಕೆ ಸರಿಸಿದ ಪೊಲೀಸರು, ಅಂತಿಮ ದರ್ಶನಕ್ಕೂ ಅವಕಾಶ ನೀಡದೆ ನೇರವಾಗಿ ಶವಸಂಸ್ಕಾರಕ್ಕೆ ಕರೆದೊಯ್ಯುತ್ತಾರೆ. ಇದನ್ನು ಕಂಡ ಅಸಹಾಯಕ ತಾಯಿ ಕಣ್ಣೀರಾಕುವ ದೃಶ್ಯಾವಳಿ ವಿಡಿಯೊದಲ್ಲಿ ಸೆರೆಯಲಾಗಿದೆ.

ಅತ್ಯಾಚಾರ ಮತ್ತು ಹಲ್ಲೆಗೊಳಗಾಗಿದ್ದ ಯುವತಿಯನ್ನು ದೆಹಲಿಯ ಸಫ್ದಾರ್‌ಗುಂಜ್ ಆಸ್ಪತ್ರೆಯ ಐಸಿಯುನಲ್ಲಿಡಲಾಗಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಆಕೆಗೆ ಚಿಕಿತ್ಸೆ ಫಲಿಸದೆ ನಿನ್ನೆ ಮುಂಜಾನೆ ಮೃತಪಟ್ಟಿದ್ದಳು. ಮೇಲ್ಜಾತಿಯ ನಾಲ್ಕು ಯುವಕರು ಯುವತಿಯ ಮೇಲೆ ಅತ್ಯಾಚಾರ ಎಸಗಿ ಮಾರಣಾಂತಿಕ ಹಲ್ಲೆ ನಡೆಸಿದ್ದರು. ಇದೀಗ ಅವರನ್ನು ಬಂಧಿಸಲಾಗಿದೆ. ಯುವತಿಯು ಪರಿಶಿಷ್ಟ ಜಾತಿ ಸಮುದಾಯಕ್ಕೆ ಸೇರಿದವರಾಗಿದ್ದರು ಎನ್ನಲಾಗಿದೆ.

ಯುವತಿಯ ಶವವನ್ನು ಮಧ್ಯರಾತ್ರಿಯ ನಂತರ ದೆಹಲಿಯಿಂದ 200 ಕಿ.ಮೀ ದೂರದಲ್ಲಿರುವ ಹಾಥರಸದಲ್ಲಿರುವ ಗ್ರಾಮಕ್ಕೆ ಕೊಂಡೊಯ್ಯಲಾಯಿತು. ವರದಿಗಾರರನ್ನು, ಕುಟುಂಬ ಮತ್ತು ಗ್ರಾಮಸ್ಥರನ್ನು ದೂರವಿರಿಸಲು ಹಾಥರಸದ ಪೊಲೀಸರು ಮಾನವ ಸರಪಳಿಯನ್ನು ರಚಿಸಿದರು. ಅಂತ್ಯ ಸಂಸ್ಕಾರದ ಸ್ಥಳದಲ್ಲಿ ಪೊಲೀಸರು ಮಾತ್ರ ಹಾಜರಿದ್ದರು. ಆಕೆಯ ಕುಟುಂಬವು ಅಂತಿಮ ದರ್ಶನವನ್ನು ಕೂಡ ಪಡೆಯಲಾಗಲಿಲ್ಲ. ಅವರನ್ನೆಲ್ಲ ಮನೆಯ್ಲಿ ಬಂಧಿಸಲಾಗಿತ್ತು ಎಂದು ಎಂದು ಆರೋಪಿಸಲಾಗಿದೆ.

ಎಸ್ ಐಟಿಯಿಂದ ತನಿಖೆ:
ಸಿಎಂ ಯೋಗಿ ಆದಿತ್ಯನಾಥ್ ಅವರು ಘಟನೆಯ ತನಿಖೆಗಾಗಿ ಮೂರು ಸದಸ್ಯರ ಎಸ್‌ಐಟಿಯನ್ನು ರಚಿಸಿದ್ದು, ಏಳು ದಿನಗಳಲ್ಲಿ ಘಟನೆಯ ಸಂಪೂರ್ಣ ವರದಿ ಸಲ್ಲಿಸುವಂತೆ ಸೂಚನೆ ನೀಡಿದ್ದಾರೆ. ಅಲ್ಲದೆ ತ್ವರಿತ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆಸುವಂತೆ ಮುಖ್ಯಮಂತ್ರಿ ಆದೇಶಿಸಿದ್ದಾರೆ.