ಕುಂದಾಪುರ: ಉದ್ಯಮಿ ಕಟ್ಟೆ ಭೋಜಣ್ಣನ ಆತ್ಯಹತ್ಯೆಗೆ ಆಭರಣ ವ್ಯಾಪಾರಿ ಮತ್ತು ಬ್ರೋಕರ್ ಕಾರಣ? ಡೆತ್ ನೋಟ್ ನಲ್ಲಿ ಬಯಲಾಯ್ತು ಸತ್ಯ

ಕುಂದಾಪುರ: ಗುರುವಾರದಂದು ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಕುಂದಾಪುರದ ಖ್ಯಾತ ಉದ್ಯಮಿ, ಕಟ್ಟೆ ಭೋಜಣ್ಣ ಅವರ ಡೆತ್ ನೋಟ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇಬ್ಬರು ಉದ್ಯಮಿಗಳಾದ ಗೋಲ್ಡ್ ಜ್ಯುವೆಲರ್ಸ್‌ನ ಗಣೇಶ್ ಶೆಟ್ಟಿ ಮತ್ತು ಬ್ರೋಕರ್ ಹಂಗಳೂರು ಇಸ್ಮಾಯಿಲ್ ಅವರ ಹೆಸರನ್ನು ತಮ್ಮ ಡೆತ್ ನೋಟ್‌ನಲ್ಲಿ ಉಲ್ಲೇಖಿಸಿದ್ದಾರೆ.

ಮೊಳಹಳ್ಳಿ ಗಣೇಶ್ ಶೆಟ್ಟಿ ಎಂಬುವವರ ಮನೆಯ ಸಿಟ್‌ಔಟ್‌ನಲ್ಲಿ ಕುಳಿತು ತನ್ನ ರಿವಾಲ್ವರ್‌ ಬಳಸಿ ಆತ್ಮಹತ್ಯೆ ಮಾಡುತ್ತೇನೆಂದು ತಿಳಿಸುವ ಮುನ್ನ, ನಗದು ಹಾಗೂ ಚಿನ್ನ ವಾಪಸ್‌ ನೀಡದ ಕಾರಣ ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಕಟ್ಟೆ ಭೋಜಣ್ಣ ಡೆತ್‌ ನೋಟ್‌ನಲ್ಲಿ ವಿವರಿಸಿದ್ದಾರೆ.

2013 ರ ಫೆಬ್ರವರಿ ತಿಂಗಳಲ್ಲಿ 3 ಕೋಟಿ 34 ಲಕ್ಷ ನಗದು ಹಾಗೂ 5 ಕೆಜಿ ಚಿನ್ನವನ್ನು ನೀಡಿದ್ದಾರೆ. ಆದರೆ ಪಡೆದ ಹಣವನ್ನಾಗಲಿ, ಬಡ್ಡಿಯನ್ನಾಗಲಿ ಅವರಿಬ್ಬರು ವಾಪಾಸು ನೀಡಲಿಲ್ಲ. ಈ ಕುರಿತು ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರ ಸುಮ್ಮುಖದಲ್ಲಿಯೇ 6 ರಿಂದ 7 ಬಾರಿ ಪಂಚಾಯಿತಿ ನಡೆಸಲಾಗಿತ್ತು. ಅಲ್ಲದೇ ಗಣೇಶ್‌ ಶೆಟ್ಟಿ ಅವರು ಪಂಚಾಯಿತಿಯಲ್ಲಿ ವಾಯಿದೆ ಪಡೆದಿದ್ದರೂ ಕೂಡ ಹಣವನ್ನು ಹಿಂದಿರುಗಿಸಿಲ್ಲ.

ಚಿನ್ನ ಮತ್ತು ನಗದು ಹಾಗೂ ಬ್ಯಾಂಕ್‌ ಬಡ್ಡಿ ಸೇರಿ ಸುಮಾರು 9 ಕೋಟಿಗೂ ಅಧಿಕ ಆಗಿರುತ್ತದೆ. ನಾನು ಇಲ್ಲಿಯ ತನಕ ಮರ್ಯಾದೆಯಿಂದಲೇ ಬಾಳಿದವನು. ನಾನು ಹೊರಗಿನವರಿಗೆ ಹಣವನ್ನು ಕೊಡಬೇಕಾಗಿದೆ. ಬ್ಯಾಂಕಿನಲ್ಲಿ ಸಾಲ ಇದೆ. ಗಣೇಶ್‌ ಶೆಟ್ಟಿ ಅವರ ಮನೆಗೆ ತಿರುಗಿ ತಿರುಗಿ ಸಾಕಾಯ್ತು. ಹೀಗಾಗಿ ಮನಸ್ಸಿಗೆ ಬೇಜಾರಾಗಿ ಈ ದಿನ ಗಣೇಶ್‌ ಶೆಟ್ಟಿ ಅವರ ಮನೆಯಲ್ಲಿ ನಾನು ನನ್ನ ರಿವಾಲ್ವಾರ್‌ನಿಂದ ಆತ್ಮಹತ್ಯೆ ಮಾಡಿಕೊಂಡಿರುತ್ತೇನೆ. ಇಷ್ಟೇ ಅಲ್ಲಾ ಮೊಳಹಳ್ಳಿ ಗಣೇಶ್‌ ಶೆಟ್ಟಿ ಮತ್ತು ಹಂಗಳೂರು ಇಸ್ಮಾಯಿಲ್‌ ಇವರಿಂದ ಹಣವನ್ನು ರಿಕವರಿ ಮಾಡಿಸಿ ನನ್ನ ಮನೆಯವರಿಗೆ ನೀಡಬೇಕಾಗಿ ಕೇಳಿಕೊಳ್ಳುತ್ತೇನೆ ಎಂದು ಡೆತ್‌ನೋಟ್‌ನಲ್ಲಿ ಬರೆದಿದ್ದಾರೆ.

ಡೆತ್ ನೋಟ್ ಆಧಾರದಲ್ಲಿ ಕುಂದಾಪುರ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.