ಟಿಎಆರ್ ( Tax Audit Report) ಸಲ್ಲಿಕೆಗೆ ಅ.31 ಡೆಡ್ ಲೈನ್.

ನವದೆಹಲಿ: ಟ್ಯಾಕ್ಸ್ ಆಡಿಟ್ ರಿಪೋರ್ಟ್​ಗಳನ್ನು ಸಲ್ಲಿಸಲು ಸೆಪ್ಟೆಂಬರ್ 30ಕ್ಕೆ ಇದ್ದ ಗಡುವನ್ನು ಅಕ್ಟೋಬರ್ 31ರವರೆಗೆ ವಿಸ್ತರಿಸಲಾಗಿದೆ.

ಆದಾಯ ತೆರಿಗೆಗಳ ಕಾನೂನು ನಿಯಂತ್ರಕವಾದ ಸಿಬಿಡಿಟಿ ಎರಡು ಹೈಕೋರ್ಟ್​ಗಳ ನಿರ್ದೇಶನದ ಮೇರೆಗೆ ಈ ನಿರ್ಧಾರ ಕೈಗೊಂಡಿದೆ. ರಾಜಸ್ಥಾನ್ ಹೈಕೋರ್ಟ್ ಮತ್ತು ಕರ್ನಾಟಕ ಹೈಕೋರ್ಟ್ ಟ್ಯಾಕ್ಸ್ ಆಡಿಟ್ ರಿಪೋರ್ಟ್​ಗಳನ್ನು ಸಲ್ಲಿಸಲು ಡೆಡ್​ಲೈನ್ ಅನ್ನು ಅ. 31ರವರೆಗೆ ವಿಸ್ತರಿಸುವಂತೆ ಸಿಬಿಡಿಟಿಗೆ ನಿರ್ದೇಶನ ನೀಡಿದ್ದವು.

ತೆರಿಗೆ ಪಾವತಿದಾರರು ಹಾಗೂ ಪ್ರಾಕ್ಟೀಶನರ್​ಗಳಿಗೆ ಆಡಿಟ್ ರಿಪೋರ್ಟ್ ಅನ್ನು ಸರಿಯಾದ ಸಮಯಕ್ಕೆ ಮುಗಿಸಲು ಕೆಲ ಸಮಸ್ಯೆಗಳಿವೆ ಎಂದು ಹೇಳಿ ಚಾರ್ಟರ್ಡ್ ಅಕೌಂಟೆಂಟ್ ಸಂಘಟನೆಗಳು ಒಳಗೊಂಡಂತೆ ವಿವಿಧ ಸಂಘಟನೆಗಳ ಪ್ರತಿನಿಧಿಗಳು ಸಿಬಿಡಿಟಿಯನ್ನು ಸಂಪರ್ಕಿಸಿದ್ದುವಂತೆ. ದೇಶದ ಕೆಲ ಭಾಗಗಳಲ್ಲಿ ಪ್ರವಾಹ ಹಾಗು ಇತರ ನೈಸರ್ಗಿಕ ವಿಕೋಪಗಳಿಂದ ಬ್ಯುಸಿನೆಸ್ ಚಟುವಟಿಕೆಗೆ ಧಕ್ಕೆಯಾಗಿದೆ. ಇದರಿಂದ ಆಡಿಟ್ ಮಾಡುವುದು ವಿಳಂಬವಾಗಿದೆ ಎಂಬುದು ಈ ಸಂಘಟನೆಗಳ ವಾದವಾಗಿದೆ.

ಸಿಬಿಡಿಟಿ ಬಳಿ ಮನವಿ ಮಾಡಿದ್ದು ಮಾತ್ರವಲ್ಲ, ಈ ವಿಚಾರವು ವಿವಿಧ ಹೈಕೋರ್ಟ್​ಗಳಲ್ಲೂ ದಾಖಲಾಗಿದೆ. ಸದ್ಯ ರಾಜಸ್ಥಾನ್ ಹೈಕೋರ್ಟ್ ಮತ್ತು ಕರ್ನಾಟಕ ಹೈಕೋರ್ಟ್ ತೀರ್ಪು ನೀಡಿದ್ದು, ಡೆಡ್​ಲೈನ್ ವಿಸ್ತರಿಸುವಂತೆ ಸಿಬಿಡಿಟಿಗೆ ನಿರ್ದೇಶನ ನೀಡಿವೆ.

ಇದೇ ವೇಳೆ, ಇನ್ಕಮ್ ಟ್ಯಾಕ್ಸ್ ಇ ಫೈಲಿಂಗ್ ಪೋರ್ಟಲ್ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎನ್ನುವ ಸುದ್ದಿಯನ್ನು ಸಿಬಿಡಿಟಿ ಅಲ್ಲಗಳೆದಿದೆ. ಪೋರ್ಟಲ್​ನಲ್ಲಿ ಯಾವುದೇ ತಾಂತ್ರಿಕ ದೋಷ ಇಲ್ಲ. ಟ್ಯಾಕ್ಸ್ ಆಡಿಟ್ ರಿಪೋರ್ಟ್​ಗಳು ಸರಿಯಾಗಿ ಅಪ್​ಲೋಡ್ ಆಗುತ್ತಿವೆ ಎಂದು ಸಿಬಿಡಿಟಿ ತನ್ನ ಸೋಷಿಯಲ್ ಮೀಡಿಯಾ ಪೋಸ್ಟ್​ನಲ್ಲಿ ಸ್ಪಷ್ಟಪಡಿಸಿದೆ.

ಸೆಪ್ಟೆಂಬರ್ 24ರಂದು ಒಂದೇ ದಿನ 60,000ಕ್ಕೂ ಅಧಿಕ ಟ್ಯಾಕ್ಸ್ ಆಡಿಟ್ ರಿಪೋರ್ಟ್​ಗಳು ಅಪ್​ಲೋಡ್ ಆಗಿವೆ. ಇಲ್ಲಿಯವರೆಗೆ ಅಪ್​ಲೋಡ್ ಆದ ಟಿಎಆರ್​ಗಳ ಸಂಖ್ಯೆ 4 ಲಕ್ಷಕ್ಕೂ ಅಧಿಕ. ಇದೇ ವೇಳೆ, ಸೆಪ್ಟೆಂಬರ್ 23ರವರೆಗೂ ಸಲ್ಲಿಕೆಯಾದ ಐಟಿ ರಿಟರ್ನ್​ಗಳ ಸಂಖ್ಯೆ 7.57 ಕೋಟಿಗೂ ಅಧಿಕ ಎಂದು ಹೇಳಲಾಗಿದೆ.