ಆತ್ರಾಡಿ ಮದಗದಲ್ಲಿ ತಾಯಿ, ಮಗಳ ಮೃತ ದೇಹ ಪತ್ತೆ: ಅಸಹಜ ಸಾವಿನ ಶಂಕೆ

ಉಡುಪಿ:  ಉಡುಪಿ ತಾಲೂಕಿನ ಆತ್ರಾಡಿ ಗ್ರಾ.ಪಂ ವ್ಯಾಪ್ತಿಯ ಮದಗದಲ್ಲಿ ತಾಯಿ ಮತ್ತು 10 ವರ್ಷದ ಮಗುವಿನ ಮೃತದೇಹ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಕೊಲೆಯಾದವರನ್ನು ಮದಗ ನಿವಾಸಿ 28 ವರ್ಷದ ಚೆಲುವಿ ಹಾಗೂ ಆಕೆಯ ಮಗಳು 10 ವರ್ಷದ ಪ್ರಿಯಾ ಎಂದು ಗುರುತಿಸಲಾಗಿದೆ. ಇವರ ಮೃತದೇಹ ಮನೆಯ ಕೋಣೆಯಲ್ಲಿ ಪತ್ತೆಯಾಗಿದ್ದು, ಬಾಯಿಯಲ್ಲಿ ರಕ್ತದ ಕಲೆಗಳು ಕಂಡು ಬಂದಿದೆ ಎನ್ನಲಾಗಿದೆ.

ಮಣಿಪಾಲದ ಖಾಸಗಿ ಸಂಸ್ಥೆಯಲ್ಲಿ ಹೌಸ್ ಕೀಪಿಂಗ್ ಕೆಲಸ ಮಾಡಿಕೊಂಡಿದ್ದ ಚೆಲುವಿ, ಅವರ ಇಬ್ಬರು ಮಕ್ಕಳು ಮತ್ತು ತಾಯಿ ಮನೆಯಲ್ಲಿ ವಾಸವಿದ್ದರು. ಆದರೆ ಭಾನುವಾರ ಚೆಲುವಿ ಅವರ ತಾಯಿ ಮತ್ತು ಮಗ ಊರಿಗೆ ತೆರಳಿದ್ದರಿಂದ ಮನೆಯಲ್ಲಿ ಚೆಲುವಿ ಮತ್ತು ಮಗಳು ಮಾತ್ರ ವಾಸವಿದ್ದರು.

ಬೆಳಿಗ್ಗೆ ಸ್ಥಳೀಯ ಮನೆಯವರಿಗೆ ಕರೆ ಮಾಡಿ ಚೆಲುವಿಯ ಮೊಬೈಲ್ ಸ್ವಿಚ್ ಆಫ್ ಆಗಿದೆ ಎಂದು ಚೆಲುವಿಯ ತಾಯಿ ಮಾಹಿತಿ ನೀಡಿದ್ದು, ಸ್ಥಳೀಯರು ಮನೆಗೆ ತೆರಳಿದಾಗ ಬಾಗಿಲು ಅರ್ಧ ತೆರೆದಿದ್ದು, ಒಳ ಹೋಗಿ ನೋಡಿದಾಗ ಮೃತ ದೇಹ ಪತ್ತೆಯಾಗಿದೆ.

ಸ್ಥಳದಲ್ಲಿ ಹೆಚ್ಚವರಿ ಎಸ್ಪಿ ಸಿದ್ದಲಿಂಗಪ್ಪ, ಡಿವೈಎಸ್ಪಿ ಸುಧಾಕರ್ ನಾಯ್ಕ್, ಬ್ರಹ್ಮಾವರ ವೃತ್ತ ನಿರೀಕ್ಷಕ ಅನಂತಪದ್ಮನಾಭ ಸೇರಿದಂತೆ ಅಧಿಕಾರಿಗಳು ಮೊಕ್ಕಾಂ ಹೂಡಿದ್ದಾರೆ.

ಸ್ಥಳಕ್ಕೆ ಶ್ವಾನ ದಳ, ಬೆರಳಚ್ಚು ತಜ್ಞರು, ಎಫ್.ಎಸ್.ಎಲ್ ತಂಡ ಆಗಮಿಸಿ ಮಾಹಿತಿ ಕಲೆ ಹಾಕುತ್ತಿದೆ. ಹಿರಿಯಡಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.