ಡಿ. 30ರಂದು ಮಲ್ಪೆ ಕಡಲ ಕಿನಾರೆಯಲ್ಲಿ ಬೃಹತ್ ಮತ್ಸ್ಯಮೇಳ

ಉಡುಪಿ: ಮೀನುಗಾರಿಕೆ ಹಾಗೂ ಮೀನು ಸೇವನೆ ಪ್ರೋತ್ಸಾಹಿಸುವ ಉದ್ದೇಶದಿಂದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಷನ್ ಮೀನುಗಾರಿಕಾ ಇಲಾಖೆಯ ಸಹಭಾಗಿತ್ವದಲ್ಲಿ ಬೃಹತ್ ಮತ್ಸ್ಯ ಮೇಳ ‘ಫಿಶ್ ಫೆಸ್ಟ್-2018’ ಅನ್ನು ಡಿ. 30ರಂದು ಮಲ್ಪೆ ಕಡಲ ಕಿನಾರೆಯಲ್ಲಿ ಆಯೋಜಿಸಿದೆ ಎಂದು ಫೆಡರೇಷನ್ ಅಧ್ಯಕ್ಷ ಯಶ್ ಪಾಲ್ ಸುವರ್ಣ ಹೇಳಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ಅವರು, ಮೀನುಗಾರಿಕೆಯನ್ನು ಅಭಿವೃದ್ಧಿಪಡಿಸುವುದರೊಂದಿಗೆ ರಾಜ್ಯದಾದ್ಯಂತ ಮುಂಬರುವ ದಿನಗಳಲ್ಲಿ  ಫೆಡರೇಷನ್ ವತಿಯಿಂದ ಮತ್ಸ್ಯ ಕ್ಯಾಂಟೀನ್ ಆರಂಭಿಸಿ ತಾಜಾ ಮೀನಿನ ಖಾದ್ಯಗಳನ್ನು ಮತ್ಸ್ಯಪ್ರಿಯರಿಗೆ ಒದಗಿಸುವ ಚಿಂತನೆ ಇದ್ದು, ಈ ಯೋಜನೆಗೆ ಪೂರ್ವಭಾವಿಯಾಗಿ ಈ ಮತ್ಸ್ಯ ಮೇಳವನ್ನು ಹಮ್ಮಿಕೊಳ್ಳಲಾಗಿದೆ. ಈ ಮೇಳದಲ್ಲಿ ಸುಮಾರು 1 ಲಕ್ಷ ಮಂದಿ ಮತ್ಸ್ಯಪ್ರಿಯರು ಭಾಗವಹಿಸುವ ನಿರೀಕ್ಷೆ ಇದೆ ಎಂದರು.
ಮತ್ಸ್ಯಮೇಳದಲ್ಲಿ ಏನೇನಿದೆ?:
ಈ ಮೇಳದಲ್ಲಿ ಮತ್ಸ್ಯಪ್ರಿಯರಿಗಾಗಿ ತಾಜಾ ಮೀನಿನ ವೈವಿಧ್ಯಮಯ ಖಾದ್ಯಗಳ ಮಳಿಗೆ, ಸಾರ್ವಜನಿಕರಿಗಾಗಿ ಈಜು ಸ್ಪರ್ಧೆ ಸಹಿತ ಜಲ ಕ್ರೀಡೆಗಳು, ಸಾಂಪ್ರದಾಯಿಕ ಕೈರಂಪಣಿ ಮೀನುಗಾರಿಕೆ, ಪುರುಷರ ಬೀಚ್ ವಾಲಿಬಾಲ್, ಮಹಿಳೆಯರ ಬೀಚ್ ಥ್ರೋಬಾಲ್, ಪುರುಷ ಹಾಗೂ ಮಹಿಳಾ ತಂಡಗಳ  ಬೀಚ್ ಕಬ್ಬಡಿ ಮತ್ತು ಹಗ್ಗಜಗ್ಗಾಟ, ಮರಳು ಶಿಲ್ಪ ಸ್ಪರ್ಧೆ, ಚಿತ್ರ ಬಿಡಿಸುವ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಸ್ಪರ್ಧೆಯಲ್ಲಿ ವಿಜೇತರಾದವರಿಗೆ ನಗದು ಬಹುಮಾನ ಮತ್ತು ಪ್ರಶಸ್ತಿಗಳನ್ನು ನೀಡಲಾಗುವುದು. ಶ್ವಾನ ಪ್ರದರ್ಶನ, ಗಾಳಿಪಟ ಪ್ರದರ್ಶನ ಹಾಗೂ ಅಂತರಾಷ್ಟ್ರೀಯ ಖ್ಯಾತಿಯ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದೆ. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಗುವುದು. ಹೆಚ್ಚಿನ ಮಾಹಿತಿಗೆ ಮೊಬೈಲ್ ಸಂಖ್ಯೆ 91641 01390, 99640 23344 88674 ಎಂದು ತಿಳಿಸಿದರು.
ಮೀನುಗಾರರ ಬೇಡಿಕೆ: 
60 ವರ್ಷ ಮೇಲ್ಪಟ್ಟ ಮೀನುಗಾರರಿಗೆ ಪಿಂಚಣಿ ಸೌಲಭ್ಯ ನೀಡಬೇಕು, ಶೂನ್ಯ ಬಡ್ಡಿದರದ ಸಾಲ ಯೋಜನೆ ಜಾರಿಗೊಳಿಸಬೇಕು. ಮೀನುಗಾರಿಕಾ ದೋಣಿಗಳ ಸೀಮೆಎಣ್ಣೆ ಪ್ರಮಾಣದ ಹೆಚ್ಚಳ ಮಾಡಬೇಕು. ಮೀನುಗಾರಿಕೆಗೆ ವಿತರಿಸುವ ಡಿಸೇಲ್ ಮೇಲಿನ ರೋಡ್ ಸೆಸ್ ರದ್ದು ಮಾಡಬೇಕು. ಪ್ರತ್ಯೇಕ ಮೀನುಗಾರಿಕಾ ಕೈಗಾರಿಕಾ ವಲಯ ನಿರ್ಮಿಸಬೇಕು. ಕೃಷಿಗೆ ಒದಗಿಸುವ ಸೌಲಭ್ಯಗಳನ್ನು ಮೀನುಗಾರಿಕೆಗೂ ವಿಸ್ತರಿಸಬೇಕು. ಕೇಂದ್ರದಲ್ಲಿ ಮೀನುಗಾರಿಕೆಗೆ ಪ್ರತ್ಯೇಕ ಸಚಿವಾಲಯ ನಿರ್ಮಾಣ ಮಾಡಬೇಕು ಎಂದು ಆಗ್ರಹಿಸಿದರು. ಫೆಡರೇಷನ್ ನಿರ್ದೇಶಕ ಸುರೇಶ್ ಸಾಲಿಯಾನ್, ಯತೀಶ್ ಕೋಟ್ಯಾನ್ ಸುದ್ದಿಗೋಷ್ಠಿಯಲ್ಲಿದ್ದರು.