ಬಾಗಲಕೋಟೆ: ಡಿಸಿಎಂ ಲಕ್ಷ್ಮಣ ಸವದಿ ಮಗನ ಕಾರು ಬೈಕ್ವೊಂದಕ್ಕೆ ಡಿಕ್ಕಿಯಾಗಿ ಗಂಭೀರವಾಗಿ ಗಾಯಗೊಂಡಿದ್ದ ಬೈಕ್ ಸವಾರ ಸಾವನ್ನಪ್ಪಿರುವ ಘಟನೆ ನಡೆದಿದೆ.
ಲಕ್ಷ್ಮಣ ಸವದಿ ಪುತ್ರ ಚಿದಾನಂದ ಸವದಿ ಹುನಗುಂದದಿಂದ ವಿಜಯಪುರ ಮಾರ್ಗವಾಗಿ ತೆರಳುತ್ತಿದ್ದರು. ಈ ವೇಳೆ ಅವರ ಕಾರು ಚಿತ್ರದುರ್ಗ -ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿ 50 ಕೂಡಲಸಂಗಮ ಕ್ರಾಸ್ ಬಳಿ ಬೈಕ್ಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಈ ವೇಳೆ ಬೈಕ್ ಸವಾರ ಕೂಡ್ಲೆಪ್ಪ(58) ಅವರ ತಲೆಗೆ ಗಂಭೀರ ಗಾಯವಾಗಿತ್ತು. ಕೂಡಲೇ ಅವರನ್ನ ಬಾಗಲಕೋಟೆ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿತ್ತು. ಆದ್ರೆ ಆಸ್ಪತ್ರೆಗೆ ತಂದ ಕೆಲವೇ ಕ್ಷಣದಲ್ಲಿ ಚಿಕಿತ್ಸೆ ಫಲಿಸದೆ ಅವರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಮೃತ ಕೂಡ್ಲೆಪ್ಪ ಬಾಗಲಕೋಟೆ ತಾಲೂಕಿನ ಚಿಕ್ಕಹಂಡರಗಲ್ ಗ್ರಾಮದ ನಿವಾಸಿ. ನಿನ್ನೆ ಸಂಜೆ ಹೊಲಕ್ಕೆ ಹೋಗಿ ವಾಪಸ್ ಮನೆಗೆ ಬರುವಾಗ ಅಪಘಾತ ಸಂಭವಿಸಿದೆ. ಕೆಎ-22 ಎಂಸಿ 5151 ನಂಬರಿನ ಕಾರು ಬೈಕ್ಗೆ ಡಿಕ್ಕಿಯಾಗಿದ್ದು, ಚಿದಾನಂದ ಅವರೇ ಕಾರನ್ನ ಚಾಲನೆ ಮಾಡುತ್ತಿದ್ದರು ಎಂದು ಮೃತನ ಸಂಬಂಧಿಕರು ಹೇಳ್ತಿದ್ದಾರೆ. ಡಿಕ್ಕಿ ಹೊಡೆದ ನಂತರ ಬೈಕ್ ಸವಾರನನ್ನು ಆಸ್ಪತ್ರೆಗೆ ಕರೆದೊಯ್ಯುವ ಬದಲು, ಸವದಿ ಮಗ ತಮ್ಮ ವಾಹನದ ನಂಬರ್ ಜಖಂಗೊಳಿಸಿ ದಾಖಲಾತಿ ಸಮೇತ ಇನ್ನೊಂದು ವಾಹನದಲ್ಲಿ ಹೊರಡಲು ಮುಂದಾದರು ಎಂದು ಆರೋಪಿಸಿದ್ದಾರೆ.