ಅನುಮತಿಯಿಲ್ಲದೇ ಸಭೆ ಸಮಾರಂಭ ನಡೆಸಿದಲ್ಲಿ ಪ್ರಕರಣ ದಾಖಲು: ಡಿಸಿ ಜಿ.ಜಗದೀಶ್

ಉಡುಪಿ ಜುಲೈ 7: ಉಡುಪಿ ಜಿಲ್ಲೆಯಲ್ಲಿ ಪ್ರಸ್ತುತ ಕೋವಿಡ್-19 ಪಾಸಿಟಿವ್ ಪ್ರಕರಣಗಳು ದಿನೇ ದಿನೇ ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾಗುತ್ತಿರುವುದು ಗಂಭೀರದ ವಿಷಯವಾಗಿದ್ದು, ಜಿಲ್ಲೆಯಲ್ಲಿ ಯಾವುದೇ ಪೂರ್ವಾನುಮತಿ ಇಲ್ಲದೆ, ನಿಯಮ ಬಾಹಿರವಾಗಿ ಹುಟ್ಟುಹಬ್ಬದ ಆಚರಣೆ, ಮೆಹಂದಿ ಕಾರ್ಯಕ್ರಮಗಳು, ಸನ್ಮಾನ ಕಾರ್ಯಕ್ರಮ ಮುಂತಾದವುಗಳು ನಡೆಯುತ್ತಿದ್ದು, ಇಂತಹ ಕಾರ್ಯಕ್ರಮಗಳಿಗೆ ಅವಕಾಶವಿಲ್ಲ ಎಂಬ ಅಂಶವನ್ನು ಸಂಘಟಕರು ಅರಿತುಕೊಳ್ಳಬೇಕು. ಇಂತಹ ಕಾರ್ಯಕ್ರಮಗಳು ಕೋವಿಡ್ -19ನ್ನು ಹರಡುವಂತಹದಾಗಿದ್ದು, ಈ ಕಾರ್ಯಕ್ರಮಗಳ ಸಂಘಟಕರ ಮೇಲೆ ಕಡ್ಡಾಯವಾಗಿ ಪ್ರಕರಣ ದಾಖಲಿಸಿ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಎಚ್ಚರಿಕೆ ನೀಡಿದ್ದಾರೆ.

ಪೂರ್ವಾನುಮತಿಯ ಮೇರೆಗೆ ಜರುಗುವ ಮದುವೆ, ಇತರೆ ಸಭೆ ಸಮಾರಂಭ, ಸನ್ಮಾನ ಇತ್ಯಾದಿ ಕಾರ್ಯಕ್ರಮಗಳಲ್ಲಿ ಸರ್ಕಾರದ ಆದೇಶದನ್ವಯ , ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಗ್ಲೌಸ್, ಮಾಸ್ಕ್, ಸ್ಯಾನಿಟೈಸರ್ ಬಳಕೆ, ಶುಚಿತ್ವ ಕಾಪಾಡಿಕೊಳ್ಳುವಿಕೆಗೆ ಹಾಗೂ  ಇತರ ಎಸ್.ಓ.ಪಿ. ಕ್ರಮಗಳು ಯಥಾ ರೀತಿಯಲ್ಲಿ  ಪಾಲನೆಯಾಗುತ್ತಿರುವ ಬಗ್ಗೆ ಖಾತರಿಪಡಿಸಿಕೊಳ್ಳಲು ಸಂಬಂಧಿಸಿದ ತಹಶೀಲ್ದಾರರು, ತಾಲೂಕು ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿಗಳು, ಉಡುಪಿ ನಗರಸಭೆ ಪೌರಾಯುಕ್ತರು, ಮುಖ್ಯಾಧಿಕಾರಿಗಳು, ಗ್ರಾಮ ಲೆಕ್ಕಾಧಿಕಾರಿಗಳು, ಪಂಚಾಯತ್ ಅಭಿವೃದ್ದಿ ಅಧಿಕಾರಿಗಳು ಹಾಗೂ ಆಯಾ ಇಲಾಖಾ ಸಿಬ್ಬಂದಿ ವರ್ಗದವರು ಖುದ್ದಾಗಿ ಭೇಟಿ ನೀಡಿ ಖಚಿತಪಡಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ.

ಸೂಕ್ತ ಸಾಮಾಜಿಕ ಅಂತರದ ಕೊರತೆ ಹಾಗೂ ಇತರೆ ಕಟ್ಟುನಿಟ್ಟಿನ ನಿಯಮ ಪಾಲನೆಯಾಗದ ಕಾರಣಗಳಿಂದ ಕೋವಿಡ್-19 ಸೋಂಕಿತರ ಸಂಖ್ಯೆ ಏರುಗತಿಯಲ್ಲಿ ಸಾಗುತ್ತಿರುವ ವಾಸ್ತವದ ದಿನಗಳಲ್ಲಿ, ಸನ್ಮಾನದಂತಹ ಕಾರ್ಯಕ್ರಮಗಳಿಗೆ ಅನುಮತಿಯನ್ನು ನೀಡುವುದು  ಸೂಕ್ತವಲ್ಲವೆಂದು  ಜಿಲ್ಲಾಧಿಕಾರಿ ಹಾಗೂ ಜಿಲ್ಲಾ  ದಂಡಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.