ಉಡುಪಿ : ಸದೃಢ ಸಮಾಜಕ್ಕೆ ಹೆಣ್ಣು ಮಕ್ಕಳ ಸಬಲೀಕರಣ ಅಗತ್ಯವಾಗಿದ್ದು, ಅವರ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡುವಂತೆ ಜಿಲ್ಲಾಧಿಕಾರಿ ಜಿ. ಜಗದೀಶ್ ಹೇಳಿದರು.
ಅವರು ಶುಕ್ರವಾರ, ಮಕ್ಕಳ ಸಹಾಯವಾಣಿ 1098, ಉಡುಪಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ರೋಟರಿ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ನಿಟ್ಟೂರಿನ ಸ್ತ್ರೀ ಸೇವಾ ನಿಕೇತನದಲ್ಲಿ ನಡೆದ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.
ಹೆಣ್ಣು ಮಕ್ಕಳನ್ನು ಸಮಾನವಾಗಿ ನೋಡಿ, ಸಮಾಜದಲ್ಲಿ ಸಮಾನ ಸ್ಥಾನಮಾನ ಕೊಡಬೇಕೆನ್ನುವುದನ್ನು ನಾವು ಎಷ್ಟರ ಮಟ್ಟಿಗೆ ಪರಿಗಣಿಸುತ್ತೆವೆ ಎನ್ನುವುದನ್ನು ಹೆಣ್ಣು ಮತ್ತು ಗಂಡು ಮಕ್ಕಳನ್ನು ಬೆಳೆಸುವ ರೀತಿಯಲ್ಲಿ ನಾವು ನೋಡಬಹುದು. ಹೆಣ್ಣು ಗಂಡೆಂಬ ತಾರತಮ್ಯ ಮಾಡದೇ ಪುರುಷನಂತೆಯೇ ಮಹಿಳೆಗೂ ಶಿಕ್ಷಣ ನೀಡಿ ಆಕೆಯನ್ನು ಆರ್ಥಿಕವಾಗಿ ಸಬಲಳಾಗಿಸಬೇಕು.
ಬಾಲ್ಯ ವಿವಾಹ, ಹೆಣ್ಣು ಭ್ರೂಣ ಹತ್ಯೆಯಂತಹ ಅನಿಷ್ಠ ಪದ್ದತಿಯಿಂದಾಗಿ ಹೆಣ್ಣು ಮಕ್ಕಳು ಅವಕಾಶ ವಂಚಿತರಾಗದಂತೆ ನೋಡಿಕೊಳ್ಳುವ ಜವಬ್ದಾರಿ ನಮ್ಮ ಮೇಲಿದೆ. ಹೆಣ್ಣು ಭ್ರೂಣ ಹತ್ಯೆ ನಡೆಸಿದ ಪ್ರಕರಣಗಳು ಜಿಲ್ಲೆಯಲ್ಲಿ ಕಂಡು ಬಂದಲ್ಲಿ ಅಂತಹವರ ವಿರುದ್ದ ಕಠಿಣ ಕ್ರಮ ಜರುಗಿಸುವ ಎಚ್ಚರಿಕೆ ನೀಡಿದ ಡಿಸಿ, ಅಗತ್ಯವಿರುವವರಿಗೆ ಸರಕಾರದ ಸವಲತ್ತುಗಳು ಸರಿಯಾಗಿ ತಲುಪುವಂತೆ ನೋಡಿಕೊಳ್ಳಲು ಪ್ರತೀ ತಿಂಗಳು ಸಭೆ ನಡೆಸಿ ಬೇಕಾದ ಕ್ರಮ ಕೈಗೊಳ್ಳುವಲ್ಲಿ ಜಿಲ್ಲಾಡಳಿತ ಕಾರ್ಯಪ್ರವೃತ್ತವಾಗಿದೆ ಎಂದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕಾವೇರಿ ಲೇಲೆ ಮಾತನಾಡಿದರು. ಕಾರ್ಯಕ್ರಮದಲ್ಲಿ ಬಾಲ ಮಂದಿರದ ಮಕ್ಕಳಿಗೆ ಉಡುಗೊರೆಯನ್ನು ವಿತರಿಸಲಾಯಿತು.
ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ರೊನಾಲ್ಡ್ ಬಿ. ಫುಟಾರ್ಡೋ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಗ್ರೇಸಿ ಗೋನ್ಸಾಲ್ವೀಸ್, ಮಾಹೆಯ ವಿದ್ಯಾರ್ಥಿ ಆಪ್ತ ಸಮಾಲೋಚಕಿ ಶಿಲ್ಪಾ ಜೋಷಿ, ಮಕ್ಕಳ ಸಹಾಯ ವಾಣಿ ನಿರ್ದೇಶಕ ರಾಮ ಚಂದ್ರ ಉಪಾಧ್ಯಾಯ ಉಪಸ್ಥಿತರಿದ್ದರು. ರೋಟರಿ ಅಧ್ಯಕ್ಷ ಜನಾರ್ದನ ಭಟ್ ಸ್ವಾಗತಿಸಿದರು, ತ್ರಿವೇಣಿ ನಿರೂಪಿಸಿದರು. ಕಸ್ತೂರಿ ವಂದಿಸಿದರು.