ಉಡುಪಿ: ನೀತಿ ಸಂಹಿತೆ ಉಲ್ಲಂಘಿಸದಂತೆ ಜಿಲ್ಲಾಧಿಕಾರಿ ಖಡಕ್ ಆದೇಶ

 ಉಡುಪಿ : ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಯಾವುದೇ ರಾಜಕೀಯ ಪಕ್ಷಗಳು ಮಾದರಿ ನೀತಿ ಸಂಹಿತೆ ಉಲ್ಲಂಘನೆಗೆ ಅವಕಾಶ ನೀಡದಂತೆ ಪ್ರಚಾರ ಕಾರ್ಯಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ತಿಳಿಸಿದ್ದಾರೆ.

ಅವರು ಸೋಮವಾರ, ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಎಲ್ಲಾ ರಾಜಕೀಯ ಪಕ್ಷಗಳು ನೀತಿ ಸಂಹಿತೆ ಅಡಿಯಲ್ಲಿಯೇ ಪ್ರಚಾರ ಕಾರ್ಯಗಳನ್ನು ಕೈಗೊಳ್ಳಬೇಕು, ಪ್ರಚಾರ ಕಾರ್ಯಕ್ಕೆ ಅಗತ್ಯವಿರುವ ಎಲ್ಲಾ ರೀತಿಯ ಅನುಮತಿಯನ್ನು ಜಿಲ್ಲಾಡಳಿತ ಮುಂಚಿತವಾಗಿ ಪಡೆದು ಪ್ರಚಾರ ಕೈಗೊಳ್ಳಿ, ಪ್ರಚಾರ ಸಮಯದಲ್ಲಿ ಅನುಮತಿ ಪತ್ರಗಳ ಪ್ರತಿಯನ್ನು  ತೆಗೆದುಕೊಂಡು ಹೋಗಿ, ಧಾರ್ಮಿಕ ಸ್ಥಳ ಮತ್ತು ಸಾರ್ವಜನಿಕ ಸ್ಥಳದಲ್ಲಿ ಪ್ರಚಾರ ಮಾಡಲು ಸೂಕ್ತ ಅನುಮತಿ ಪಡೆಯುವಂತೆ ಜಿಲ್ಲಾಧಿಕಾರಿ ತಿಳಿಸಿದರು.

ಈ ಬಾರಿಯ ಚುನಾವಣೆಯನ್ನು ಪರಿಸರ ಸ್ನೇಹಿಯಾಗಿ ಆಚರಿಸುವ ಕುರಿತಂತೆ ಎಲ್ಲಾ ರಾಜಕೀಯ ಪಕ್ಷಗಳು, ಸೂಕ್ತ ಪ್ರಚಾರ ಸಾಮಗ್ರಿ ಬಳಸುವಂತೆ ತಿಳಿಸಿದ ಜಿಲ್ಲಾಧಿಕಾರಿ ಅಗತ್ಯವಿರುವ ಎಲ್ಲಾ ಅನುಮತಿ ಪಡೆಯಲು ಮುಂಚಿತವಾಗಿಯೇ, ಸೂಕ್ತ ದಾಖಲೆಗಳೊಂದಿಗೆ ನಿಗಧಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಿ, ಇದರಿಂದ ನಿಗಧಿತ ಸಮಯಕ್ಕೆ ಅನುಮತಿ ದೊರೆಯಲು ಸಾದ್ಯವಾಗಲಿದೆ ಹಾಗೂ ಜಿಲ್ಲಾಡಳಿತದಿಂದ ಶೀಘ್ರದಲ್ಲಿ ಅನುಮತಿ ನೀಡಲು ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು.

 ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಷಾ ಜೇಮ್ಸ್ ಮಾತನಾಡಿ, ಧಾರ್ಮಿಕ ಸ್ಥಳಗಳಲ್ಲಿ ನೀತಿ ಸಂಹಿತೆ ಉಲ್ಲಂಘನೆ ಮಾಡಬೇಡಿ, ಪ್ರಚಾರ ಕಾರ್ಯಕ್ಕಾಗಿ ಪೊಲೀಸ್ ಇಲಾಖೆಯಿಂದ ಅಗತ್ಯವಿರುವ ಎಲ್ಲಾ ಅನುಮತಿಯನ್ನು ಶೀಘ್ರದಲ್ಲಿ ನೀಡಲಾಗುವುದು, ಪಕ್ಷಗಳ ನಡುವೆ ಘರ್ಷಣೆಗೆಳಿಗೆ ಅವಕಾಶ ನೀಡಬೇಡಿ, ನೀತಿ ಸಂಹಿತೆ ಉಲ್ಲಂಘನೆ ಕಂಡು ಬಂದಲ್ಲಿ ತಕ್ಷಣ ಮಾಹಿತಿ ನೀಡಿ, ತಪ್ಪಿತಸ್ಥರ ವಿರುದ್ದ ನಿಷ್ಪಕ್ಷಪಾತವಾಗಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. 

 ಅಪರ ಜಿಲ್ಲಾಧಿಕಾರಿ ವಿದ್ಯಾಕುಮಾರಿ, ಬಿ.ಜೆ.ಪಿ, ಕಾಂಗ್ರೆಸ್, ಜನತಾದಳ ಹಾಗೂ ಸಿಪಿಐಎಂ ಪಕ್ಷದ ಪ್ರತಿನಿಧಿಗಳು ಉಪಸ್ಥಿತರಿದ್ದರು.