ಬ್ರಹ್ಮಾವರ: ತಾಲೂಕು ವ್ಯಾಪ್ತಿಯಲ್ಲಿ ಸಲ್ಲಿಕೆಯಾಗಿರುವ 94 ಸಿಸಿ ಕುರಿತ ಅರ್ಜಿಗಳನ್ನು ಆದಷ್ಟು ಶೀಘ್ರದಲ್ಲಿ ವಿಲೇ ಮಾಡುವಂತೆ ತಹಸೀಲ್ದಾರ್ ಅವರಿಗೆ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಸೂಚನೆ ನೀಡಿದರು.
ಅವರು ಮಂಗಳವಾರ ಕಚ್ಚೂರು ಮಾಲ್ತಿದೇವಿ ಸಭಾಭವನದಲ್ಲಿ ನಡೆದ, ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯ ಸಾರ್ವಜನಿಕರು 94 ಸಿಸಿ ಹಾಗೂ ನಿವೇಶನ ನೀಡುವ ಕುರಿತು ಸಲ್ಲಿಸಿದ್ದ ಅರ್ಜಿಗಳನ್ನು ಪರಿಶೀಲಿಸಿದ ಜಿಲ್ಲಾಧಿಕಾರಿಗಳು, ವಸತಿ ಮತ್ತು ನಿವೇಶನ ಕುರಿತು ಸಲ್ಲಿಕೆಯಾಗಿರುವ ಅರ್ಜಿಗಳನ್ನು ಆದ್ಯತೆಯ ಮೇಲೆ ನಿಯಮಾನುಸಾರ ವಿಲೇ ಮಾಡುವಂತೆ ಬ್ರಹ್ಮಾವರ ತಹಸೀಲ್ದಾರ್ ಅವರಿಗೆ ಸೂಚನೆ ನೀಡಿದರು.
ಕಾರ್ಯಕ್ರಮದಲ್ಲಿ ಸಾರ್ವಜನಿಕರು ತುಕ್ಕು ಹಿಡಿದಿರುವ ವಿದ್ಯುತ್ ತಂತಿಗಳ ಬದಲಾವಣೆ, ರಸ್ತೆ ಮತ್ತು ಚರಂಡಿ ಅಭಿವೃದ್ಧಿ, ತೋಡುಗಳಿಗೆ ಕಾಲುಸಂಕ ನಿರ್ಮಾಣ, ಸಾಗುವಳಿ ಚೀಟಿ ನೀಡುವ ಬಗ್ಗೆ, ಹೊಳೆದಂಡೆಗೆ ತಡೆಗೋಡೆ ನಿರ್ಮಾಣ, ಕೃಷಿ ಭೂಮಿಗೆ ಉಪ್ಪುನೀರು ಬರುತ್ತಿರುವ ಬಗ್ಗೆ, ನದಿಗೆ ತ್ಯಾಜ್ಯ ಸೇರುತ್ತಿರುವ ಬಗ್ಗೆ ಸೇರಿದಂತೆ ವಿವಿಧ ಸಮಸ್ಯೆಗಳ ಬಗ್ಗೆ ಸುಮಾರು 60 ಕ್ಕೂ ಹೆಚ್ಚು ಅಹವಾಲುಗಳನ್ನು ಸಲ್ಲಿಸಿದರು.
ಎಲ್ಲಾ ಅಹವಾಲುಗಳನ್ನು ಆಲಿಸಿದ ಜಿಲ್ಲಾಧಿಕಾರಿಗಳು ಸ್ಥಳದಲ್ಲಿಯೇ ಇದ್ದ ವಿವಿಧ ಅಧಿಕಾರಿಗಳಿಗೆ ಈ ಸಮಸ್ಯೆಗಳ ಬಗ್ಗೆ ಪರಿಶೀಲಿಸಿ, ಸಾರ್ವಜನಿಕರಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸುವಂತೆ ಸೂಚಿಸಿದರು.
ಇದೇ ಸಂದರ್ಭದಲ್ಲಿ ಕಾರ್ಮಿಕ ಕಲ್ಯಾಣ ಮಂಡಳಿಯಿಂದ, ನೊಂದಾಯಿತ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ಮಕ್ಕಳಿಗೆ ಉಚಿತವಾಗಿ ನೀಡುವ ಸ್ಕೂಲ್ ಕಿಟ್ ನ್ನು ವಿತರಿಸಲಾಯಿತು.
ಬಾರ್ಕೂರು ಗ್ರಾಮ ಪಂಚಾಯತ್ ಅಧ್ಯಕ್ಷ ಶಾಂತಾರಾಮ ಶೆಟ್ಟಿ ಮಾತನಾಡಿ, ಕಚ್ಚೂರು ಗ್ರಾಮದಲ್ಲಿ 117 ಮಂದಿ ವಸತಿ ರಹಿತರಿದ್ದು, ಇವರಿಗೆ ನಿವೇಶನ ನೀಡಲು ಈ ಗ್ರಾಮದಲ್ಲಿ ನಿವೇಶನದ ಕೊರತೆ ಇದ್ದು, ಹೊಸಾಳ ಗ್ರಾಮದಲ್ಲಿ ಸಾಕಷ್ಟು ಜಾಗವಿದ್ದು, ಇವರಿಗೆ ಅಲ್ಲಿ ಜಾಗ ಗುರುತಿಸಿ ನಿವೇಶನ ನೀಡುವಂತೆ ಹಾಗೂ ಬಾರ್ಕೂರು ಗ್ರಾಮ ಪಂಚಾಯತ್ ಚಾರಿತ್ರಿಕ ಹಿನ್ನೆಲೆ ಹೊಂದಿರುವ ಪ್ರದೇಶವಾಗಿದ್ದು, ಇಲ್ಲಿ ಅನೇಕ ಮಹತ್ವದ ಪುರಾತನ ಶಿಲಾ ಶಾಸನಗಳು ಇದ್ದು ಇವುಗಳನ್ನು ಸಂಗ್ರಹಿಸಿ, ಸೂಕ್ತ ರೀತಿಯಲ್ಲಿ ಸಂರಕ್ಷಿಸಿ ಇಡಲು ಪ್ರತ್ಯೇಕ ಸ್ಥಳ ಮೀಸಲಿಡುವಂತೆ ಕೋರಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಹೆಚ್, ಕುಂದಾಪುರ ಉಪ ವಿಭಾಗಾಧಿಕಾರಿ ರಶ್ಮಿ, ಜಿಲ್ಲಾ ಕಾರ್ಮಿಕ ಅಧಿಕಾರಿ ಕುಮಾರ್, ಬ್ರಹ್ಮಾವರ ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ ಇಬ್ರಾಹಿಂಪುರ, ಕಚ್ಚೂರು ಮಾಲ್ತಿದೇವಿ ದೇವಾಲಯದ ಮೊಕ್ತೇಸರ ಶಿವಪ್ಪ ಹಾಗೂ ಜಿಲ್ಲಾ ಮಟ್ಟದ ವಿವಿಧ ಅನುಷ್ಠಾನಾಧಿಕಾರಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಆಯುಷ್ಮಾನ್ ಭಾರತ್ ಕಾರ್ಡ್ ನೋಂದಣಿ, ಉಚಿತ ಆರೋಗ್ಯ ತಪಾಸಣೆ, ಆಯುಷ್ ಇಲಾಖೆಯಿಂದ ತಪಾಸಣೆ, ಕಾರ್ಮಿಕ ಇಲಾಖೆ ವತಿಯಿಂದ ಇ-ಶ್ರಮ್ ನೋಂದಣಿ ಮತ್ತು ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್ ಧನ್ ನೋಂದಣಿ ಶಿಬಿರಗಳನ್ನು ಆಯೋಜಿಸಲಾಗಿತ್ತು.
ಬ್ರಹ್ಮಾವರ ತಹಸೀಲ್ದಾರ್ ರಾಜಶೇಖರ ಮೂರ್ತಿ ಸ್ವಾಗತಿಸಿದರು.