ಪ್ರಕೃತಿಗೆ ಸಮೀಪವಾಗಿ ಬದುಕುವ ಆಯುರ್ವೇದದ ಆರೋಗ್ಯಕರ ಜೀವನ ಪದ್ದತಿ ಆಳವಡಿಸಿಕೊಳ್ಳಿ: ಜಿಲ್ಲಾಧಿಕಾರಿ ಕೂರ್ಮಾ ರಾವ್

ಉಡುಪಿ: ಪ್ರಕೃತಿಯೊಂದಿಗೆ ಬಾಳುವುದು ಮಾನವನ ಜೀವನ ವಿಧಾನ. ಪ್ರಕೃತಿಗೆ ಹತ್ತಿರವಾಗಿದ್ದುಕೊಂಡು ಆರೋಗ್ಯಕರವಾಗಿ ಜೀವನ ನಡೆಸಬೇಕು ಎಂಬ ತಿಳುವಳಿಕೆ ನೀಡುವ ಆಯುರ್ವೇದ ಪದ್ದತಿಯನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಆಧುನಿಕ ವೈದ್ಯಕೀಯ ಪದ್ದತಿಯಲ್ಲಿ ಅನಾರೋಗ್ಯ ಪೀಡಿತ ವ್ಯಕ್ತಿಗೆ ಚಿಕಿತ್ಸೆ ನೀಡಲಾಗುತ್ತದೆ. ಆದರೆ ಆಯುರ್ವೇದವು ವ್ಯಕ್ತಿಯು ತನ್ನ ಆರೋಗ್ಯವನ್ನು ಪ್ರತಿದಿನದ ತನ್ನ ಜೀವನ ಪದ್ದತಿಯಲ್ಲಿ ಹೇಗೆ ಅಳವಡಿಸಿಕೊಳ್ಳಬೇಕು ಎಂಬುದನ್ನು ತಿಳಿಸುತ್ತದೆ. ಇದರಲ್ಲಿ ಯಾವುದೇ ಅಡ್ಡಪರಿಣಾಮಗಳಿಲ್ಲ. ಆಯುರ್ವೇದ ಸೂತ್ರಗಳನ್ನು ಪ್ರತಿದಿನದ ನಮ್ಮ ದಿನಚರಿಯಲ್ಲಿ ಪಾಲಿಸಬೇಕು ಎಂದರು.

ಅವರು ಆದಿತ್ಯವಾರದಂದು ಅಜ್ಜರಕಾಡು ಜಿಲ್ಲಾ ಆಯುಷ್ ಆಸ್ಪತ್ರೆಯಲ್ಲಿ, ಆಯುಷ್ ಇಲಾಖೆ ಬೆಂಗಳೂರು, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆಯುಷ್ ಇಲಾಖೆ ಉಡುಪಿ ಹಾಗೂ ಆಯುಷ್ ಫೆಡರೇಷನ್ ಆಫ್ ಇಂಡಿಯಾ ಉಡುಪಿ ತಾಲೂಕು ಇವರ ಸಹಯೋಗದಲ್ಲಿ ನಡೆದ ರಾಷ್ಟ್ರೀಯ ಆಯುರ್ವೇದ ದಿನಾಚರಣೆ ಹಾಗೂ ಧನ್ವಂತರಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ದಿ ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಲಿಮಿಟೆಡ್ ಅಧ್ಯಕ್ಷ ಕೆ ಉದಯ್ ಕುಮಾರ್ ಶೆಟ್ಟಿ ಮಾತನಾಡಿ, ಕೋವಿಡ್ ನಂತರ ಆಯುರ್ವೇದದ ಮಹತ್ವ ಕುರಿತು ಹೆಚ್ಚಿನ ಜಾಗೃತಿ ಮೂಡಿದೆ. ಆಯುಷ್ ಆಸ್ಪತ್ರೆಯಲ್ಲಿ ದೊರೆಯುವ ವಿವಿಧ ಸೌಲಭ್ಯಗಳ ಬಗ್ಗೆ ಸಾರ್ವಜನಿರಿಗೆ ತಿಳಿಸಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಮಾತನಾಡಿ, ಸಾವಿರಾರು ವರ್ಷಗಳ ಇತಿಹಾಸ ಇರುವ ಅಯುರ್ವೇದ ಬಳಕೆಯಿಂದ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯ ದೊರೆಯಲಿದ್ದು, ಇಡೀ ವಿಶ್ವವೇ ಇಂದು ಭಾರತದ ಆಯುರ್ವೇದ ಪದ್ದತಿಯನ್ನು ಬೆರಗಿನಿಂದ ನೋಡುತ್ತಿದ್ದು, ಇದು ಜೀವನದಲ್ಲಿ ಪ್ರತಿದಿನ ಬಳಕೆಯಾಗಲಿ ಎಂದರು.

ಆಯುಷ್ ಫೆಡರೇಶನ್ ಆಫ್ ಇಂಡಿಯಾದ ಅಧ್ಯಕ್ಷ ನಾರಾಯಣ ಅಂಚನ್ ಉಪಸ್ಥಿತರಿದ್ದರು.

ಆಯುರ್ವೇದದ ಮಹತ್ವದ ಕುರಿತು ಉದ್ಯಾವರ ಎಸ್.ಡಿ.ಎಂ ಕಾಲೇಜಿನ ಪ್ರಾಚಾರ್ಯ ಡಾ.ಯೋಗೇಶ್ ಆಚಾರ್ಯ ಉಪನ್ಯಾಸ ನೀಡಿದರು. ಆಯುರ್ವೇದ ಸಸ್ಯಗಳ ವಿತರಣೆ ಹಾಗೂ ಆರೋಗ್ಯ ತಪಾಸಣೆ ಕಾರ್ಯಕ್ರಮ ನಡೆಯಿತು.

ಜಿಲ್ಲಾ ಆಯುಷ್ ಅಧಿಕಾರಿ ಡಾ.ಸತೀಶ್ ಆಚಾರ್ಯ ಸ್ವಾಗತಿಸಿದರು, ಡಾ.ವೀಣಾ ಕಾರಂತ ವಂದಿಸಿದರು,
ಡಾ.ಸರ್ವೋತ್ತಮ ಶೆಟ್ಟಿ ನಿರೂಪಿಸಿದರು.