ವಚನಭ್ರಷ್ಟ ಕಾಂಗ್ರೆಸ್ ಸರಕಾರದ ಸುಳ್ಳು ಗ್ಯಾರಂಟಿ ವಿರುದ್ದ ತಾಳ್ಮೆ ಕಳೆದುಕೊಂಡ ಜನತೆ ಬೀದಿಗಿಳಿಯುವ ದಿನ ದೂರವಿಲ್ಲ: ಕುಯಿಲಾಡಿ ಸುರೇಶ್ ನಾಯಕ್

ಉಡುಪಿ: ಅಭಿವೃದ್ಧಿಯ ವಿಚಾರದಲ್ಲಿ ಬಿಜೆಪಿಯನ್ನು ಎದುರಿಸಲು ಸಾಧ್ಯವಿಲ್ಲ ಎಂಬುದನ್ನು ಅರಿತಿರುವ ಕಾಂಗ್ರೆಸ್ 5 ಉಚಿತ ಗ್ಯಾರಂಟಿಗಳ ಆಮಿಷವೊಡ್ಡಿ ಚುನಾವಣೆಯನ್ನು ಗೆದ್ದರೂ, ಈ 5 ಗ್ಯಾರಂಟಿಗಳನ್ನು ಯಥಾವತ್ತಾಗಿ ಜಾರಿಗೊಳಿಸದೆ ರಾಜ್ಯದ ಜನತೆಗೆ ಮೋಸ ಎಸಗಿದೆ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ತಿಳಿಸಿದ್ದಾರೆ.

ಸರಕಾರದ 5 ಗ್ಯಾರಂಟಿ ಯೋಜನೆ ಜಾರಿ ಬಳಿಕ ಬಿಜೆಪಿ ಜನರಲ್ಲಿ ಗೊಂದಲ ಮೂಡಿಸುತ್ತಿದೆ ಎಂಬ ಕೆಪಿಸಿಸಿ ವಕ್ತಾರೆ ವೆರೋನಿಕಾ ಕರ್ನೆಲಿಯೋ ಅವರ ಹೇಳಿಕೆಗೆ ತಿರುಗೇಟು ನೀಡಿರುವ ಅವರು, ಚುನಾವಣಾ ಪೂರ್ವದಲ್ಲಿ ಬೇಕಾಬಿಟ್ಟಿ ಗ್ಯಾರಂಟಿಗಳನ್ನು ಘೋಷಿಸಿರುವ ಕಾಂಗ್ರೆಸ್ಸಿಗೆ ಅಧಿಕಾರ ದೊರೆತ ಬಳಿಕ ಈ ಉಚಿತ ಗ್ಯಾರಂಟಿಗಳು ಬಿಸಿ ತುಪ್ಪವಾಗಿ ಪರಿಣಮಿಸಿದೆ. ಈ ಹಿನ್ನೆಲೆಯಲ್ಲಿ ಅರೆಬೆಂದ ಗ್ಯಾರಂಟಿಗಳ ನಡುವೆ ಗೊಂದಲದ ಗೂಡಾಗಿರುವ ಕಾಂಗ್ರೆಸ್ ಸರಕಾರ ಉಚಿತ ಗ್ಯಾರಂಟಿಗಳ ಜಾರಿಗೆ ದಿನಕ್ಕೊಂದು ಷರತ್ತುಗಳನ್ನು ಹಾಕುತ್ತಾ ಜನತೆಯಲ್ಲಿ ಆತಂಕ ಮತ್ತು ಗೊಂದಲವನ್ನು ಸೃಷ್ಠಿಸಿದೆ. ಸರಕಾರದ ಮೇಲೆ ವಿಶ್ವಾಸ ಕಳೆದುಕೊಂಡಿರುವ ಜನತೆ ತಾಳ್ಮೆ ಕಳೆದುಕೊಂಡು ಬೀದಿಗಿಳಿಯುವ ದಿನ ದೂರವಿಲ್ಲ ಎಂದು ತಿಳಿಸಿದ್ದಾರೆ.

ಕಾಂಗ್ರೆಸಿಗರು ತಾವೇ ಸೃಷ್ಠಿಸಿರುವ 40% ಕಮಿಷನ್ ಪ್ರಹಸನ ಮತ್ತು 15 ಲಕ್ಷ ಖಾತೆಗೆ ಹಾಕುವ ಪ್ರಹಸನವನ್ನು ಗುರಾಣಿಯನ್ನಾಗಿಸಿ ಪದೇ ಪದೇ ಅದೇ ರಾಗ ಅದೇ ಹಾಡು ಎಂಬಂತೆ ಹೇಳಿಕೆ ನೀಡುತ್ತಿರುವುದು ಹಾಸ್ಯಾಸ್ಪದ. ಇಂತಹ ಅಸಂಬದ್ಧ ಹೇಳಿಕೆಗಳನ್ನು ನೀಡುತ್ತಾ ಜನತೆಯ ಮುಂದೆ ನಗೆ ಪಾಟಲಿಗೀಡಾಗುವ ಬದಲು ಕಾಂಗ್ರೆಸ್ಸಿಗರು ತಮ್ಮದೇ ಸರಕಾರದಲ್ಲಿ ಈ ಬಗ್ಗೆ ಸೂಕ್ತ ತನಿಖೆಯನ್ನು ನಡೆಸುವ ಮೂಲಕ ಪ್ರಕರಣವನ್ನು ಸಾಬೀತುಪಡಿಸುವ ಜೊತೆಗೆ ಪ್ರಧಾನಿಯವರು ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂಪಾಯಿ ಹಾಕುತ್ತೇನೆ ಎಂದಿರುವುದನ್ನು ಕೂಡಾ ರುಜುವಾತುಪಡಿಸುವ ಧೈರ್ಯ ತೋರುವುದು ಉತ್ತಮ ಎಂದು ಅವರು ಆಗ್ರಹಿಸಿದ್ದಾರೆ.

‘ಫಲಿತಾಂಶಕ್ಕಾಗಿ ಎಲ್ಲವನ್ನೂ ಮಾಡಬೇಕು; ಗ್ಯಾರಂಟಿಗಳು ಚೀಪ್ ಪಾಪ್ಯುಲಾರಿಟಿ’ ಎಂದು ಸ್ವತಃ ಕಾಂಗ್ರೆಸ್ ಸರಕಾರದ ಕೃಷಿ ಸಚಿವರು ಗ್ಯಾರಂಟಿಗಳ ಬಗ್ಗೆ ಅವಮಾನಕರ ಹೇಳಿಕೆಯನ್ನು ನೀಡಿರುವುದು ಕಾಂಗ್ರೆಸ್ ನಕಲಿ ಉಚಿತ ಗ್ಯಾರಂಟಿಗಳ ಮೂಲಕ ರಾಜ್ಯದ ಜನತೆಯನ್ನು ಯಾಮಾರಿಸಿದೆ ಎಂಬುದಕ್ಕೆ ಜ್ವಲಂತ ಉದಾಹರಣೆಯಾಗಿದೆ. ‘ನನಗೂ ಫ್ರೀ ನಿನಗೂ ಫ್ರೀ’ ‘ಹತ್ತು ಕೆ.ಜಿ. ಅಕ್ಕಿ ಬೇಕಾ ಬೇಡ್ವಾ’ ಎಂದು ಕಾಂಗ್ರೆಸ್ ಮುಖಂಡರು ಪುಂಖಾನುಪುಂಖವಾಗಿ ಉಚಿತ ಗ್ಯಾರಂಟಿಗಳ ಬಗ್ಗೆ ಪುಂಗಿ ಊದಿರುವುದು ಕೇವಲ ಚುನಾವಣಾ ಗಿಮಿಕ್ ಎಂಬುದು ಇದೀಗ ಸಾಬೀತಾಗಿದೆ.

ಗೃಹ ಜ್ಯೋತಿ ಗ್ಯಾರಂಟಿಯಡಿ 200 ಯುನಿಟ್ ವಿದ್ಯುತ್ ಫ್ರೀ ಎಂದಿರುವ ಕಾಂಗ್ರೆಸ್ ಸರಕಾರ ಉಚಿತ ಗ್ಯಾರಂಟಿಗೆ ಹಲವಾರು ಷರತ್ತುಗಳನ್ನು ಹಾಕಿರುವ ಜೊತೆಗೆ ದಿಢೀರ್ ವಿದ್ಯುತ್ ದರವನ್ನು ಏರಿಸಿ ಜನತೆಯ ಕೆಂಗಣ್ಣಿಗೆ ಗುರಿಯಾಗಿದೆ. ಗೃಹ ಲಕ್ಷ್ಮಿ ಗ್ಯಾರಂಟಿಯಡಿ ಮನೆಯೊಡತಿ ಯಾರು ಎಂಬ ವಿವಾದ ಸೃಷ್ಠಿಸಿದೆ. ಉಚಿತ 10 ಕೆ.ಜಿ. ಅಕ್ಕಿಯ ಗ್ಯಾರಂಟಿ ಅನುಷ್ಠಾನಕ್ಕೆ ಹೆಚ್ಚುವರಿ 5 ಕೆ.ಜಿ. ಅಕ್ಕಿಗಾಗಿ ಕೇಂದ್ರ ಸರಕಾರದ ಮೊರೆ ಹೋಗಿರುವ ಕಾಂಗ್ರೆಸ್ ಸರಕಾರ ಎಲ್ಲ ಪದವೀಧರ ನಿರುದ್ಯೋಗಿಗಳಿಗೆ ಮಾಸಾಶನ ನೀಡುವ ಮಾತನ್ನು ಮುರಿದು ಯುವ ಸಮುದಾಯಕ್ಕೆ ದ್ರೋಹ ಬಗೆದಿದೆ. ಇತ್ತ ಕಾಂಗ್ರೆಸ್ಸಿನ 5 ಉಚಿತ ಗ್ಯಾರಂಟಿಗಳೂ ಜಾರಿಯಾಗದೇ ಅತ್ತ ಅಭಿವೃದ್ಧಿ ಚಟುವಟಿಕೆಗಳೂ ನಡೆಯದೆ ರಾಜ್ಯ ದಿವಾಳಿತನದ ಅಂಚಿನತ್ತ ಸಾಗುವ ಎಲ್ಲ ಲಕ್ಷಣಗಳೂ ಗೋಚರಿಸುತ್ತಿವೆ ಎಂದು ಅವರು ತಿಳಿಸಿದ್ದಾರೆ.

ಚುನಾವಣಾ ಪೂರ್ವದಲ್ಲಿ ಉಚಿತ ಗ್ಯಾರಂಟಿಗಳನ್ನು ಘೋಷಿಸುವಾಗ ಕಾಂಗ್ರೆಸ್ ಮುಖಂಡರಲ್ಲಿ ಕಂಡು ಬಂದ ಉತ್ಸಾಹ, ಪೌರುಷ ಗ್ಯಾರಂಟಿ ಜಾರಿಯಲ್ಲಿ ಕಂಡು ಬಾರದೇ ಇರುವುದು ವಿಪರ್ಯಾಸ. ಅಧಿಕಾರಕ್ಕೆ ಬಂದ 24 ಗಂಟೆಗಳೊಳಗೆ ಎಲ್ಲ 5 ಉಚಿತ ಖಚಿತ ಖಂಡಿತ ನಿಶ್ಚಿತಗಳ ಗ್ಯಾರಂಟಿಗಳನ್ನು ಜಾರಿಗೊಳಿಸುವುದಾಗಿ ಅಬ್ಬರಿಸಿರುವ ಕಾಂಗ್ರೆಸ್ ಮುಖಂಡರು ಇದೀಗ ‘ಉಳ್ಳವರು ಫ್ರೀ ಗಳನ್ನು ತ್ಯಜಿಸಿ’ ಎಂದು ಗೋಗರೆಯುತ್ತಿರುವುದು ಕಾಂಗ್ರೆಸ್ ಸರಕಾರದ ದಯನೀಯ ಸ್ಥಿತಿಗೆ ಹಿಡಿದ ಕೈಗನ್ನಡಿಯಾಗಿದೆ.

ಅಧಿಕಾರವಿಲ್ಲದೆ ಚಡಪಡಿಸುತ್ತಿದ್ದ ಕಾಂಗ್ರೆಸಿಗರು, ಇದೀಗ ರಾಜ್ಯ ಸಚಿವ ಸಂಪುಟ ರಚನೆಯಾಗುತ್ತಿದ್ದಂತೆ ದಿನಕ್ಕೊಂದು ವಿವಾದಕರ ದುರಹಂಕಾರದ ಹೇಳಿಕೆಗಳನ್ನು ನೀಡುತ್ತಿರುವುದು ನೋಡಿದರೆ ಮುಖ್ಯಮಂತ್ರಿಯವರಿಗೆ ಸಚಿವರ ಮೇಲೆ ಹಿಡಿತವಿದ್ದಂತೆ ಕಂಡುಬರುತ್ತಿಲ್ಲ. ಕಾಂಗ್ರೆಸ್ ಸರಕಾರದ ಎಲ್ಲ ಜನ ವಿರೋಧಿ ನೀತಿಗಳನ್ನು ಬಿಜೆಪಿ ಸಮರ್ಥವಾಗಿ ಎದುರಿಸಲಿದೆ. ಬಿಜೆಪಿಯ ಜನಪರ ಹೋರಾಟ ಮತ್ತು ಪ್ರತಿಭಟನೆಗಳನ್ನು ಪ್ರಶ್ನಿಸುವ ನೈತಿಕತೆ ಕಾಂಗ್ರೆಸ್ಸಿಗಿಲ್ಲ. ಬೆಲೆ ಏರಿಕೆ ಎಂದು ಬೊಬ್ಬಿರಿದು ಪ್ರತಿಭಟನೆ ನಡೆಸಿದ್ದ ಕಾಂಗ್ರೆಸ್ಸಿಗೆ ಇದೀಗ ಅಗತ್ಯ ವಸ್ತುಗಳ ಬೆಲೆ ಇಳಿಸಲು ಸಕಾಲವಾಗಿದೆ. ರಾಜ್ಯದ ಜನತೆ ಎಲ್ಲ ವಿದ್ಯಮಾನಗಳನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಿದ್ದು, ಕಾಂಗ್ರೆಸಿಗರು ತಮ್ಮ ಸ್ವಾರ್ಥಕ್ಕಾಗಿ ತಾವೇ ಘೋಷಿಸಿಕೊಂಡಿರುವ ಉಚಿತಗಳ ಗ್ಯಾರಂಟಿಗಳನ್ನು ಯಥಾವತ್ತಾಗಿ ಜಾರಿಗೊಳಿಸದೆ ಇದ್ದಲ್ಲಿ ಮುಂಬರಲಿರುವ ಚುನಾವಣೆಗಳಲ್ಲಿ ಮತದಾರರೇ ಕಾಂಗ್ರೆಸ್ಸಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಕುಯಿಲಾಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.