ದೂರು ಕೊಟ್ಟವರ ಕಾರಿನಲ್ಲಿ ತಿರುಗಾಟ ಮಾಡಿದ ದಾವಣಗೆರೆ ಎಸ್ ಐ ಮತ್ತು ಪೇದೆ ವಿರುದ್ದ ಕ್ರಮ

ದಾವಣಗೆರೆ: ಖಾಸಗಿ ವಾಹನವನ್ನು ಅದರ ಮಾಲೀಕರ ಅನುಮತಿಯಿಲ್ಲದೆ ಅಥವಾ ಅದರ ಮೂಲವನ್ನು ತಿಳಿದುಕೊಳ್ಳದೆ ಬಳಸಿದ್ದಕ್ಕಾಗಿ ಮತ್ತು ನಾಗರಿಕರೊಂದಿಗೆ ಅನುಚಿತವಾಗಿ ವರ್ತಿಸಿದ್ದಕ್ಕಾಗಿ ಹದಡಿ ಪೋಲೀಸ್ ಠಾಣೆಯ ಪೇದೆ ಮತ್ತು ಮೇಲಾಧಿಕಾರಿಯ ವಿರುದ್ದ ವಿಚಾರಣೆಯನ್ನು ಕೈಗೊಳ್ಳಲಾಗಿದೆ.

ಘಟನೆಗೆ ಸಂಬಂಧಿಸಿದಂತೆ ಹದಡಿ ಪೊಲೀಸ್ ಠಾಣೆಯ ಪೊಲೀಸ್ ಪೇದೆಯನ್ನು ಅಮಾನತುಗೊಳಿಸಲಾಗಿದೆ ಮತ್ತು ಅವರ ಮೇಲಧಿಕಾರಿಯ ವಿರುದ್ಧ ಇಲಾಖಾ ವಿಚಾರಣೆಯನ್ನು ಪ್ರಾರಂಭಿಸಲಾಗಿದೆ ಎಂದು ವರದಿಯಾಗಿದೆ.

ಬೆಂಗಳೂರು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಲೋಕ್ ಕುಮಾರ್ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಪಿಎಸ್‌ಐ ಮತ್ತು ಕಾನ್‌ಸ್ಟೆಬಲ್ ವಿರುದ್ಧ ದಾವಣಗೆರೆ ಎಸ್‌ಪಿ ಈಗಾಗಲೇ ಕ್ರಮ ಕೈಗೊಂಡಿದ್ದಾರೆ ಎನ್ನುವ ಮಾಹಿತಿಯನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ.

ವಾಹನವನ್ನು ದೂರುದಾರ ಗಿರೀಶ್ ಅವರ ಸ್ನೇಹಿತ ಕಾನೂನುಬಾಹಿರವಾಗಿ ಅಡಮಾನವಿಟ್ಟಿದ್ದರು ಎಂದು ಅದರ ಮಾಲೀಕ ದೂರು ನೀಡಿದ್ದರು. ನಗರದ ವಿದ್ಯಾನಗರದಲ್ಲಿ ಕಾಫಿ ಡೇ ಹೊರಗೆ ನಿಲ್ಲಿಸಿದ್ದ ಕಾರನ್ನು ವಾಹನದ ಮಾಲೀಕ ಗಿರೀಶ್ ಗಮನಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಕಾನ್ಸ್‌ಟೇಬಲ್‌ ಮಂಜುನಾಥ್‌ ಎಂಬಾತ ತನ್ನ ಠಾಣೆಯ ಸಬ್‌ ಇನ್‌ಸ್ಪೆಕ್ಟರ್‌ ಮತ್ತು ಆತನ ಪರಿವಾರ ಜೊತೆ ಕಾಫಿ ಡೇ ಗೆ ತೆರಳಿದ್ದು, ಅಲ್ಲಿ ಕಾರನ್ನು ಕಂಡ ಮಾಲೀಕ ಪ್ರಶ್ನಿಸಿದಾಗ, ಆತನ ಮೇಲೆ ಹಲ್ಲೆ ಮಾಡಿರುವ ವೀಡಿಯೋ ಒಂದು ಜಾಲತಾಣದಲ್ಲಿ ಹರಿದಾಡುತ್ತಿತ್ತು.

ಗಿರೀಶ್ ಎಂಬವರ ಕಾರು ಇದಾಗಿದ್ದು, ಆತನ ಸ್ನೇಹಿತ ಒಂದು ತಿಂಗಳ ಹಿಂದೆ ಕಾರನ್ನು ತೆಗೆದುಕೊಂಡು ಹೋಗಿದ್ದು, ಅದನ್ನು ಹಿಂತಿರುಗಿಸಲು ನಿರಾಕರಿಸಿದ್ದರೆನ್ನಲಾಗಿದೆ. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಲಾಗಿತ್ತು. ಇಷ್ಟಾದರೂ ಕಾರನ್ನು ಮಾಲೀಕರಿಗೆ ಹಿಂತಿರುಗಿಸದೆ, ಅದೇ ಕಾರಿನಲ್ಲಿ ಶೋಕಿ ತಿರುಗಾಟ ಮಾಡಿ ಕೇಳಿದ್ದಕ್ಕೆ ಹಲ್ಲೆ ಮಾಡಿರುವ ಪೊಲೀಸರ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ.