ದಾವಣಗೆರೆ: ಜಿಲ್ಲೆಯಾದ್ಯಂತ ಕೋವಿಡ್ ಕಠಿಣ ನಿಮಯ ಜಾರಿ; ವಾರಾಂತ್ಯಕ್ಕೆ ದೇಗುಲಗಳಿಗೆ ಪ್ರವೇಶವಿಲ್ಲ

ದಾವಣಗೆರೆ: ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವುದರಿಂದ ಜಿಲ್ಲೆಯಲ್ಲಿ ಕಠಿಣ ನಿಯಮವನ್ನು ಜಾರಿಗೊಳಿಸಿ ಜಿಲ್ಲಾಡಳಿತ ಆದೇಶ ನೀಡಿದೆ.

ಪ್ರಸ್ತುತ ಜಾರಿಯಲ್ಲಿರುವ ನೈಟ್ ಕರ್ಫ್ಯೂ (ರಾತ್ರಿ 10ರಿಂದ ಬೆಳಿಗ್ಗೆ 5ರ ವರೆಗೆ) ರೂಲ್ಸ್ ಅನ್ನು ಮತ್ತಷ್ಟು ಬಿಗಿಗೊಳಿಸಿದೆ. ರಾತ್ರಿ 10ರ ಬಳಿಕ ತುರ್ತು ಸೇವೆಗಳನ್ನು ಹೊರತುಪಡಿಸಿ ಉಳಿದ ವಾಹನಗಳ ಓಡಾಟಕ್ಕೆ ಸಂಪೂರ್ಣ ನಿಷೇಧ ಹೇರಿದೆ.

ಶನಿವಾರ, ಭಾನುವಾರ ದೇಗುಲಗಳಿಗೆ ಭಕ್ತರ ಪ್ರವೇಶವಿಲ್ಲ:
ಶನಿವಾರ, ಭಾನುವಾರ ದಾವಣಗೆರೆ ಜಿಲ್ಲೆಯ ದೇಗುಲಗಳಿಗೆ ಭಕ್ತರ ಪ್ರವೇಶವಿಲ್ಲ. ವಾರದಲ್ಲಿ ಉಳಿದ ದಿನಗಳಲ್ಲಿ ದೇವರ ದರ್ಶನಕ್ಕೆ ಮಾತ್ರ ಅವಕಾಶ ನೀಡಿ ಎಂದು ದಾವಣಗೆರೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಆದೇಶ ಹೊರಡಿಸಿದ್ದಾರೆ.

ಪ್ರಸಾದ ವಿತರಣೆ, ಉತ್ಸವ, ಮುಡಿ ಸೇವೆಯೂ ನಿಷೇಧ ಆಗಿರಲಿದೆ. ಆದೇಶ ಉಲ್ಲಂಘಿಸಿದರೆ ದೇಗುಲದ ಸಮಿತಿಯೇ ಹೊಣೆ ಆಗಿರುತ್ತದೆ. ಸಮಿತಿ ವಿರುದ್ಧವೇ ವಿಪತ್ತು ನಿರ್ವಹಣೆ ಕಾಯ್ದೆಯಡಿ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.