‘ಟಾಕ್ಸಿಕ್’ ಟ್ರೈಲರ್‌ಗೆ ದಿನಾಂಕ ಫಿಕ್ಸ್: ಹೊಸ ಪೋಸ್ಟರ್‌ನೊಂದಿಗೆ ಯಶ್ ಗುಡ್‌ನ್ಯೂಸ್

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್’ (Toxic) ಚಿತ್ರದ ಕುರಿತು ಅಭಿಮಾನಿಗಳಿಗೆ ಮತ್ತೊಂದು ಸಂತಸದ ಸುದ್ದಿ ಸಿಕ್ಕಿದೆ. ನಟ ಯಶ್ ಹೊಸ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಚಿತ್ರದ ಟ್ರೈಲರ್ ಬಿಡುಗಡೆಯ ದಿನಾಂಕವನ್ನು ಅಧಿಕೃತವಾಗಿ ಘೋಷಿಸಿದ್ದಾರೆ.

ಗೀತು ಮೋಹನ್ದಾಸ್ ನಿರ್ದೇಶನದ ಈ ಸಿನಿಮಾ ಸ್ಯಾಂಡಲ್ವುಡ್ ಮಾತ್ರವಲ್ಲದೆ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿಯೂ ಭಾರೀ ನಿರೀಕ್ಷೆ ಮೂಡಿಸಿದೆ. ಚಿತ್ರತಂಡದ ಮಾಹಿತಿ ಪ್ರಕಾರ, ಆಗಸ್ಟ್‌ 8ರಂದು ‘ಟಾಕ್ಸಿಕ್’ ಚಿತ್ರದ ಟ್ರೈಲರ್ ಬಿಡುಗಡೆಯಾಗಲಿದೆ. ಆದರೆ, ಟ್ರೈಲರ್ ಬಿಡುಗಡೆಯ ನಿಖರ ಸಮಯವನ್ನು ಇನ್ನೂ ಪ್ರಕಟಿಸಲಾಗಿಲ್ಲ.

ಇದೇ ವೇಳೆ, ಯಶ್ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಚಿತ್ರದ ಹೊಸ ಬ್ಲ್ಯಾಕ್ & ವೈಟ್ ಪೋಸ್ಟರ್ ಹಂಚಿಕೊಂಡಿದ್ದಾರೆ. ಪೋಸ್ಟರ್‌ನಲ್ಲಿ ಮಳೆಯ ನಡುವೆ ಟೋಪಿ ಹಾಗೂ ಉದ್ದನೆಯ ಕೋಟ್ ಧರಿಸಿ ಕೈಯಲ್ಲಿ ಬಂದೂಕು ಹಿಡಿದು ನಿಂತಿರುವ ಯಶ್ ಅವರ ಸ್ಟೈಲಿಷ್ ಲುಕ್ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.

‘ಟಾಕ್ಸಿಕ್’ ಚಿತ್ರದಲ್ಲಿ ಯಶ್‌ಗೆ ನಾಯಕಿಯಾಗಿ ಕಿಯಾರಾ ಅಡ್ವಾಣಿ ಅಭಿನಯಿಸಿದ್ದು, ಜೊತೆಗೆ ತಾರಾ ಸುತಾರಿಯಾ, ನಯನತಾರಾ, ಹುಮಾ ಖುರೇಷಿ ಮತ್ತು ರುಕ್ಮಿಣಿ ವಸಂತ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದ ಟ್ರೈಲರ್ ಬಿಡುಗಡೆಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.