ಬೆಂಗಳೂರು: ನೇಮಕಾತಿ ಹಗರಣದಿಂದಾಗಿ ರದ್ದಾಗಿದ್ದ ಕರ್ನಾಟಕ ಪೊಲೀಸ್ ಇಲಾಖೆಯ ಸಿವಿಲ್ ಸಬ್ ಇನ್ಸ್ಪೆಕ್ಟರ್ (PSI) ಹುದ್ದೆಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಜನವರಿ 23ರಂದು ಪರೀಕ್ಷೆ ನಿಗದಿ ಪಡಿಸಿದೆ. ಈ ಹಿಂದೆ ಪರೀಕ್ಷೆ ನಡೆಸಿದ್ದು ನೇಮಕಾತಿಯಲ್ಲಿ ಹಗರಣ ನಡೆದ ಕಾರಣ ರದ್ದುಪಡಿಸಲಾಗಿತ್ತು. ಈಗ ಹೊಸ ದಿನಾಂಕವನ್ನು ನಿಗದಿಪಡಿಸಿ ಪಿಎಸ್ಐ ಮರು ಪರೀಕ್ಷೆಗೆ ವೇಳಾಪಟ್ಟಿಯನ್ನು ಅಧಿಕೃತವಾಗಿ ಬಿಡುಗಡೆ ಮಾಡಲಾಗಿದೆ.
ಪರೀಕ್ಷೆ ಸಂದರ್ಭ ಹಲವಾರು ಸೂಚನೆಗಳನ್ನು ನೀಡಲಾಗಿದ್ದು ಇದನ್ನು ಕಡ್ಡಾಯವಾಗಿ ಪಾಲಿಸುವಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಸ್.ರಮ್ಯಾ ತಿಳಿಸಿದ್ಧಾರೆ.
ಜನವರಿ 23ರಂದು ಎರಡು ವಿಷಯಗಳಿಗೆ ಪರೀಕ್ಷೆ ನಡೆಯಲಿದೆ. ಬೆಳಿಗ್ಗೆ 10.30 ರಿಂದ 12 ಮಧ್ಯಾಹ್ನನದವರೆಗೆ ಪೇಪರ್ 1 ರ ಪರೀಕ್ಷೆ ನಡೆಯಲಿದ್ದು. 50 ಅಂಕಗಳನ್ನು ನಿಗದಿ ಮಾಡಲಾಗಿದೆ.
ಮಧ್ಯಾಹ್ನ 1ರಿಂದ ಮಧ್ಯಾಹ್ನ 2.30 ರವರೆಗೆ ಪೇಪರ್ 2 ರ ಪರೀಕ್ಷೆ ನಡೆಯಲಿದ್ದು, 150 ಅಂಕಗಳನ್ನು ನಿಗದಿಪಡಿಸಲಾಗಿದೆ.
ಪಾಲಿಸಬೇಕಾದ ಸೂಚನೆಗಳು
1.ಪರೀಕ್ಷಾ ಕೇಂದ್ರದಲ್ಲಿ ಅಭ್ಯರ್ಥಿಗಳು ತಪಾಸಣೆಗೆ ಒಳಪಡುವ ಹಿನ್ನೆಲೆಯಲ್ಲಿ ಬೆಳಿಗ್ಗೆ 8.30 ಕ್ಕೆ ಸರಿಯಾಗಿ ನಿಗದಿತ ಸಮಯಕ್ಕೆ ಪರೀಕ್ಷಾ ಕೇಂದ್ರದಲ್ಲಿ ಹಾಜರಿರಬೇಕು
- ಅಭ್ಯರ್ಥಿಗಳು ಪ್ರವೇಶ ಪತ್ರದ ಜತೆಯಲ್ಲಿ ಕಡ್ಡಾಯವಾಗಿ ಗುರುತಿನ ಚೀಟಿಯನ್ನು ತರಬೇಕು. ಇದರಲ್ಲಿ ವಾಹನ ಚಾಲನಾ ಪತ್ರ, ಆಧಾರ್ ಕಾರ್ಡ್, ಪಾನ್ ಕಾರ್ಡ್, ಮತದಾರರ ಗುರುತಿನ ಚೀಟಿಯಲ್ಲಿ ಯಾವುದಾದರೂ ಒಂದನ್ನು ಹಾಜರುಪಡಿಸಿದರೆ ಮಾತ್ರ ಅಭ್ಯರ್ಥಿಯನ್ನು ಪರೀಕ್ಷಾ ಕೊಠಡಿ ಪ್ರವೇಶಕ್ಕೆ ಅವಕಾಶ ನೀಡಲಾಗುತ್ತದೆ.
- ಮೊಬೈಲ್ಗಳನ್ನು ಸಂಪೂರ್ಣ ನಿಷೇಧಿಸಲಾಗಿದೆ. ಮೊಬೈಲ್ನಲ್ಲಿ ಗುರುತಿನ ಚೀಟಿಯನ್ನು ತೋರಿಸಲು ಅವಕಾಶವಿಲ್ಲ. ಅಂತಹ ಅಭ್ಯರ್ಥಿಗಳನ್ನು ಪರೀಕ್ಷಾ ಕೇಂದ್ರ ಪ್ರವೇಶಿಸಲು ಅನುವು ಮಾಡಿಕೊಡುವುದಿಲ್ಲ.
- ಅಭ್ಯರ್ಥಿಗಳು ಸಾಧ್ಯವಾದಷ್ಟು ಕಾಲರ್ಗಳು ಇಲ್ಲದೇ ಇರುವ ಶರಟುಗಳನ್ನು ಹಾಕಿಕೊಳ್ಳಬೇಕು.
- ಯಾವುದೇ ರೀತಿಯ ಜೀನ್ಸ್ ಪ್ಯಾಂಟ್, ಬೆಲ್ಟ್, ಶೂಗಳನ್ನು ಧರಿಸಿ ಪರೀಕ್ಷೆಗೆ ಹಾಜರಾಗಲು ಅನುಮತಿ ನೀಡುವುದಿಲ್ಲ.
- ಕಿವಿ ಅಥವಾ ಬಾಯಿಯನ್ನು ಮುಚ್ಚಿಕೊಳ್ಳುವಂತಹ ಉಡುಪುಗಳನ್ನು ಧರಿಸಿ ಇಲ್ಲವೇ ಯಾವುದೇ ರೀತಿಯ ಫೇಸ್ ಮಾಸ್ಕ್ ಅನ್ನೂ ಧರಿಸಿ ಪರೀಕ್ಷಾ ಕೊಠಡಿ ಪ್ರವೇಶಿಸುವಂತಿಲ್ಲ.
- ನೀರಿನ ಬಾಟಲಿಗಳನ್ನು ಓಳ ತರಲು ಅನುಮತಿ ನೀಡುವುದಿಲ್ಲ. ಪ್ರಾಧಿಕಾರದಲ್ಲಿ ವೆಬ್ಸೈಟ್ನಲ್ಲಿ ಪ್ರಕಟಿಸಿರುವ ವಸ್ತ್ರ ಸಂಹಿತೆಯನ್ನು ಕಡ್ಡಾಯವಾಗಿ ಪಾಲಿಸಬೇಕು.
- ಮೊದಲನೇ ಅವಧಿ ಪರೀಕ್ಷೆ ಮುಗಿದ ನಂತರ ಅಭ್ಯರ್ಥಿಗಳು ಪರೀಕ್ಷಾ ಕೇಂದ್ರದಿಂದ ಹೊರಗೆ ಹೋಗಲು ಅನುಮತಿ ನೀಡುವುದಿಲ್ಲ.
- ಕಾಲಕಾಲಕ್ಕೆ ಪ್ರಾಧಿಕಾರದ ವೆಬ್ಸೈಟ್ನಲ್ಲಿ ಪ್ರಕಟಿಸಲಾಗುವ ಸೂಚನೆಗಳನ್ನು ಅಭ್ಯರ್ಥಿಗಳು ಕಡ್ಡಾಯವಾಗಿ ಪಾಲಿಸಬೇಕು.