ಬರಹ: ಪ್ರಸಾದ ಶೆಣೈ
” ದಸ್ಕತ್” ತನ್ನ ಗ್ರಾಮ್ಯ ಜೀವನದ ಸಮೃದ್ಧ ಫೀಲ್ ಕೊಡುವ, ನಮ್ಮೂರಿನ ಕತೆಯೇ ಇದು ಅನ್ನುವ ಭಾವ ಮೂಡಿಸುವ ಒಂದೊಳ್ಳೆಯ ತುಳು ಸಿನಿಮಾ. ಸತ್ವಯುತವಾದ ಕತೆಯನ್ನು ಅದೆಷ್ಟು ಸಹಜವಾಗಿ, ಹೃದ್ಯವಾಗಿ ಕಟ್ಟಿಕೊಟ್ಟಿದ್ದಾರೆಂದರೆ ಕೇಪುಳಪಲ್ಕೆಯ ಹಸಿರು, ಅಲ್ಲಿನ ರಾತ್ರಿ, ಅಲ್ಲಿನ ಭಾಷೆ, ಅಲ್ಲಿನ ಹಾಡು, ಅಲ್ಲಿನ ಮೌನ, ಅಲ್ಲಿನ ಪಂಚಾಯತ್ ಕಚೇರಿ, ಎಲ್ಲಿಗೋ ಕರೆದೊಯ್ಯುವ ಅಲ್ಲಿನ ಪುಟ್ಟ ಪುಟ್ಟ ಮನೆಗಳು, ಅಲ್ಲಿನ ಆಚರಣೆ, ಅಲ್ಲಿನ ಹುಲಿವೇಷ, ಎಲ್ಲವೂ ನೋಡುತ್ತ ನೋಡುತ್ತ ನಮ್ಮದಾಗುತ್ತ ಹೋಗುತ್ತದೆ. ಅದೆಷ್ಟು ಮುದ್ದಾಗಿ ಚಿತ್ರೀಕರಣ ಮಾಡಿದ್ದಾರೆಂದರೆ ನಾವು ದೃಶ್ಯದೊಳಗೆ ಜೀವಿಸುತ್ತೇವೆ. ತುಳುನಾಡಿನ ಆಚರಣೆಯನ್ನು ಯಾವುದೇ ಆಡಂಭರವಿಲ್ಲದೇ ಗ್ರಾಮ್ಯವಾಗಿ ಕಟ್ಟಿಕೊಟ್ಟ ರೀತಿಗೆ ಪ್ರೇಕ್ಷಕ ಬೆರಗಾಗುತ್ತಾನೆ. ಇಷ್ಟರವರೆಗೆ ತೆರೆಕಂಡ ತುಳು ಸಿನಿಮಾಗಳಲ್ಲಿ ಕಾಣದ ಹೊಸತೇನೋ ನಾವೀನ್ಯತೆಯೊಂದು ಇಲ್ಲಿದೆ. ಹಾಡುಗಳಂತೂ ಕಿವಿಗಳಲ್ಲಿ ಮತ್ತೆ ಮತ್ತೆ ಮೊಳಗುತ್ತದೆ, ಎಲ್ಲೋ ಕರೆದೊಯ್ಯುತ್ತದೆ.
ಆಟಿ ಕಳೆಂಜನಂತೂ ಕನಸಲ್ಲೂ ಕಾಡುವಂತಿದ್ದಾನೆ. ಕಳೆಂಜ ಗದ್ದೆಯ ಬದುವಿನಲ್ಲಿ, ನೀರಿನಲ್ಲಿ ಓಡಿಕೊಂಡು ಹೋಗುವ ದೃಶ್ಯವೊಂದು ಕ್ಲಾಸಿಕ್, ಎದೆಯ ಬಡಿತವನ್ನು ಇನ್ನಷ್ಟು ಜೋರು ಮಾಡುವ ಆ ದೃಶ್ಯ ಇಡೀ ಸಿನಿಮಾದ ಜೀವ. ಒಂದೊಂದು ಪಾತ್ರಗಳೂ ಸಿನಿಮಾ ಮುಗಿದ ನಂತರವೂ ಎದೆಯೊಳಗೆ ಕಾಡುತ್ತದೆ
ದಕ್ಷಿಣ ಕನ್ನಡದ ಬೆಳ್ತಂಗಡಿ, ವೇಣೂರಿನ ಹಳ್ಳಿಗಳನ್ನು ಈ ಚಿತ್ರ ನೋಡಿದ ಬಳಿಕ ಇನ್ನಷ್ಟು ಪ್ರೀತಿಸುವ ಆಸೆ ಆಗೋದಂತೂ ಖಂಡಿತ. ಇಂತಹ ಜೀವಂತಿಕೆಯ ತುಳು ಸಿನಿಮಾಗಳು ಹೆಚ್ಚಾಗಬೇಕು. ತುಳು ಸಿನಿಮಾ ಅಂದ್ರೆ ಹೀಗೆ ಇರುತ್ತದೆ ಎಂದು ಮೊದಲೇ ಊಹಿಸಿ ಥಿಯೇಟರ್ ಗೆ ಕಾಲಿಟ್ಟರೆ, ಅದು ನಾವು ಊಹಿಸಿದಂತೆ ಇರುತ್ತಿತ್ತು. ಸಿನಿಮಾ ನೋಡಿ ಹೊರಬರುವಾಗ ಮತ್ತೆ ನಿರಾಶೆ. ಆದ್ರೆ “ದಸ್ಕತ್” ನಮ್ಮ ಊಹೆಗಳನ್ನು ಸುಳ್ಳು ಮಾಡುತ್ತದೆ. ಎದೆಯೊಳಗೆ ನಿಜಕ್ಕೂ ಖುಷಿಯ ದಸ್ಕತ್ ಹಾಕುತ್ತದೆ.
ಹತ್ತರಲ್ಲಿ ಹನ್ನೊಂದಾಗದೇ ಬೇರೆಯೇ ಹಾದಿ ಹಿಡಿದು ಗೆದ್ದಿದೆ ” ದಸ್ಕತ್”. ಇನ್ನೂ ದಸ್ಕತ್ ನೋಡಿರದಿದ್ದರೆ ಒಮ್ಮೆ ನೋಡಿ ಬನ್ನಿ. ನೀವು ತುಳುನಾಡಿನವರಲ್ಲದಿದ್ದರೂ ಸಿನಿಮಾ ನಿಮಗೆ ಖಂಡಿತ ಕಾಡುತ್ತದೆ. ಗ್ರಾಮಪಂಚಾಯತ್ ನಲ್ಲಿ ನಡೆಯೋ ಭ್ರಷ್ಟಾಚಾರ, ಹಳ್ಳಿಯ ಬಡಜೀವಗಳನ್ನು ತುಳಿಯುವ ಅಧಿಕಾರಿಗಳ ಅನಾಚಾರ ಕರಾವಳಿಯ ಎಲ್ಲಾ ಹಳ್ಳಿಗಳನ್ನು ಪ್ರತಿನಿಧಿಸುವಂತಿದೆ.ಕತೆಯಲ್ಲಿ ಎಲ್ಲವನ್ನೂ ಅಂತ್ಯ ಮಾಡುವ ” ಶುಭಂ”ಆ್ಯಂಗಲ್, ಇಲ್ಲಿ ಕಾಣುವುದೇ ಇಲ್ಲ.ಯಾವುದೂ ಮುಗಿಯುವುದಿಲ್ಲ, ಬೇರೆ ಬೇರೆ ವೇಷದಲ್ಲಿ ಇಲ್ಲಿ ಎಲ್ಲವೂ ಮುಂದುವರಿಯುತ್ತಲೇ ಇರುತ್ತದೆ,ಎಂದು ಸಾರುವ ಸಿನಿಮಾ ತಂಡದ ಈ ಚಂದದ ಪ್ರಯತ್ನಕ್ಕೆ ಜೈ ಅನ್ನಲೇಬೇಕು.
