ಕುದ್ರೋಳಿ ದೇವಸ್ಥಾನದಲ್ಲಿ ಸಂಭ್ರಮದ ದಸರಾ ಮಹೋತ್ಸವ

ಮಂಗಳೂರು: ಸುಪ್ರಸಿದ್ದ ಮಂಗಳೂರು ದಸರಾದ ಹಿನ್ನಲೆಯಲ್ಲಿ ಕುದ್ರೋಳಿ ದೇವಸ್ಥಾನದ ಕೊರಗಪ್ಪ ಸಭಾಂಗಣದಲ್ಲಿ ಶ್ರೀ ಶಾರದಾ ಮಾತೆ, ಶ್ರೀ ಮಹಾಗಣಪತಿ ಹಾಗೂ ನವದುರ್ಗೆಯರ ಪ್ರತಿಷ್ಠಾಪನೆ ಅ.15ರಂದು ನೆರವೇರಿತು.

ಶ್ರೀಕ್ಷೇತ್ರ ಕುದ್ರೋಳಿಯ ಅಭಿವೃದ್ಧಿಯ ರೂವಾರಿ ಕೇಂದ್ರದ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿಯವರ ಉಪಸ್ಥಿತಿಯಲ್ಲಿ ಶಾರದಾಮಾತೆಯ ಪ್ರತಿಷ್ಠಾಪನೆ ನೆರವೇರಿತು. ಕರ್ಣಾಟಕ ಬ್ಯಾಂಕ್ ಸಿಇಒ ಪ್ರದೀಪ್ ಕುಮಾರ್ ಮಂಗಳೂರು ದಸರಾಕ್ಕೆ ಚಾಲನೆ ನೀಡಿದರು.

ಸೋಮವಾರದಂದು ಸಿರೋ-ಮಲಬಾರ್ ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಬಿಷಪ್ ‌ಲಾರೆನ್ಸ್ ಮುಕುಝಿ ಅವರು ಕುದ್ರೋಳಿ ದೇವಸ್ಥಾನಕ್ಕೆ ಭೇಟಿ ನೀಡಿ ಶಾರದೆಯ ದರ್ಶನ ಪಡೆದರು.

ಕುದ್ರೋಳಿ ಕ್ಷೇತ್ರದ ಪರವಾಗಿ ಅಧ್ಯಕ್ಷ ಎಚ್.ಎಸ್.ಸಾಯಿರಾಂ, ಪ್ರಧಾನ ಕಾರ್ಯದರ್ಶಿ ಮಾಧವ ಸುವರ್ಣ, ಕೋಶಾಧಿಕಾರಿ ಪದ್ಮರಾಜ್ ಆರ್. , ಕ್ಷೇತ್ರದ ಅಭಿವೃದ್ಧಿ ಸಮಿತಿ ಅಧ್ಯಕ್ಷ ದೇವೇಂದ್ರ ಪೂಜಾರಿ, ಸದಸ್ಯ ರಾಧಾಕೃಷ್ಣ, ಮುಂಬೈ ಭಾರತ್ ಕೋ ಆಪರೇಟಿವ್ ಬ್ಯಾಂಕ್ ಚೇರ್ಮನ್ ಸೂರ್ಯಕಾಂತ್ ಜೆ. ಸುವರ್ಣ ಆತ್ಮೀಯವಾಗಿ ಸ್ವಾಗತಿಸಿದರು. ಕಂಕನಾಡಿ ಆಲ್ಫೋನ್ಸ್ ಚರ್ಚ್ ಧರ್ಮಗುರು ಫಾ.ಮಾಣಿ, ಬೆಳ್ತಂಗಡಿ ಧರ್ಮಪ್ರಾಂತ್ಯ ಪಿಆರ್‌ಓ ಸೆಬಾಸ್ಟಿಯನ್ ಕೆ.ವಿ ಜತೆಗಿದ್ದರು.