ಬೆಂಗಳೂರು: ನಟ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ದರ್ಶನ್ ಹಾಗೂ ನಟ ಧನ್ವೀರ್ ಗೌಡ ನಡುವೆ ಅಕ್ರಮವಾಗಿ ₹10 ಕೋಟಿ ನಗದು ವಹಿವಾಟು ನಡೆದಿದೆ ಎಂದು ಆರೋಪಿಸಿ ಜಾರಿ ನಿರ್ದೇಶನಾಲಯ (ED) ಮತ್ತು ಆದಾಯ ತೆರಿಗೆ (IT) ಇಲಾಖೆಗೆ ದೂರು ಸಲ್ಲಿಸಲಾಗಿದೆ.
ವಕೀಲ ಪ್ರಶಾಂತ್ ಮೆಥಲ್ ಎಂಬುವರು ಈ ಕುರಿತು ದೂರು ಸಲ್ಲಿಸಿದ್ದು, ವಿಜಯಲಕ್ಷ್ಮಿ ದರ್ಶನ್ ಹಾಗೂ ಧನ್ವೀರ್ ಗೌಡ ನಡುವೆ ಕಾನೂನುಬಾಹಿರವಾಗಿ ಕೋಟ್ಯಂತರ ರೂಪಾಯಿ ಹಣದ ವಹಿವಾಟು ನಡೆದಿದೆ ಎಂದು ಆರೋಪಿಸಿದ್ದಾರೆ.
ವಿಜಯಲಕ್ಷ್ಮಿ ಹಾಗೂ ಧನ್ವೀರ್ ನಡುವಿನ ವಿವಾದಕ್ಕೆ ₹10 ಕೋಟಿ ಹಣದ ವ್ಯವಹಾರವೇ ಕಾರಣ ಎಂಬ ಆರೋಪ ಕೇಳಿಬಂದಿದೆ. ನಟ ದರ್ಶನ್ ಅವರ ಕಾನೂನು ಹೋರಾಟಕ್ಕೆ ಸಂಬಂಧಿಸಿದಂತೆ ಇಬ್ಬರ ನಡುವೆ ₹10 ಕೋಟಿ ಹಣ ವರ್ಗಾವಣೆಯಾಗಿದೆ ಎನ್ನಲಾಗಿದ್ದು, ಈ ವಹಿವಾಟಿನ ಕುರಿತು ಸಮಗ್ರ ತನಿಖೆ ನಡೆಸುವಂತೆ ದೂರುದಾರರು ಮನವಿ ಮಾಡಿದ್ದಾರೆ.
ನಿಯಮಗಳ ಪ್ರಕಾರ, ನಿಗದಿತ ಸಂದರ್ಭಗಳಲ್ಲಿ ₹2 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತದ ನಗದು ಸ್ವೀಕಾರಕ್ಕೆ ಆದಾಯ ತೆರಿಗೆ ಕಾಯ್ದೆಯಡಿ ನಿರ್ಬಂಧಗಳಿವೆ. ಈ ಹಿನ್ನೆಲೆಯಲ್ಲಿ, ಆರೋಪಿಸಲಾಗಿರುವ ₹10 ಕೋಟಿ ವಹಿವಾಟಿನ ಹಣದ ಮೂಲ, ಅದರ ಸ್ವರೂಪ ಹಾಗೂ ವಹಿವಾಟಿನ ಹಿಂದಿನ ಉದ್ದೇಶದ ಬಗ್ಗೆ ತನಿಖೆ ನಡೆಸಬೇಕು ಎಂದು ದೂರುದಾರರು ಒತ್ತಾಯಿಸಿದ್ದಾರೆ.















