ನವದೆಹಲಿ: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಮತ್ತೊಮ್ಮೆ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ. ಒಂದು ವರ್ಷದವರೆಗೆ ಜಾಮೀನು ಕೋರಿ ಅರ್ಜಿ ಸಲ್ಲಿಸದಂತೆ ನೀಡಲಾಗಿರುವ ಆದೇಶವನ್ನು ಪರಿಷ್ಕರಿಸುವಂತೆ ಅವರು ಮನವಿ ಸಲ್ಲಿಸಿದ್ದಾರೆ.
ಬದಲಾದ ವಕೀಲರ ಮೂಲಕ ಸಲ್ಲಿಸಿರುವ ಅರ್ಜಿಯಲ್ಲಿ, ವೈಯಕ್ತಿಕ ಸ್ವಾತಂತ್ರ್ಯ ಮತ್ತು ತ್ವರಿತ ವಿಚಾರಣೆಯ ಹಕ್ಕು ಭಾರತೀಯ ಸಂವಿಧಾನದ ಆರ್ಟಿಕಲ್ 21ರ ಅಡಿಯಲ್ಲಿ ರಕ್ಷಿಸಲ್ಪಟ್ಟ ಮೂಲಭೂತ ಹಕ್ಕುಗಳಾಗಿವೆ ಎಂದು ಉಲ್ಲೇಖಿಸಲಾಗಿದೆ. ತುರ್ತು ಪರಿಸ್ಥಿತಿಗಳಿಗೆ ಅನ್ವಯವಾಗುವಂತೆ ಹಿಂದಿನ ಆದೇಶವನ್ನು ಮಾರ್ಪಾಡು ಮಾಡಬೇಕು ಎಂದು ಅವರು ಕೋರಿದ್ದಾರೆ.
ಒಂದು ವರ್ಷದೊಳಗೆ ಜಾಮೀನು ಅರ್ಜಿ ಸಲ್ಲಿಸಲು ಅವಕಾಶ ಇಲ್ಲ ಎಂಬ ನಿರ್ಬಂಧದಿಂದ ವಿಚಾರಣೆಯ ಪ್ರಕ್ರಿಯೆ ಇನ್ನಷ್ಟು ವಿಳಂಬವಾಗುವ ಸಾಧ್ಯತೆ ಇದೆ ಎಂದು ಅರ್ಜಿಯಲ್ಲಿ ವಾದಿಸಲಾಗಿದೆ. ಜೊತೆಗೆ ವೈದ್ಯಕೀಯ ತುರ್ತು ಪರಿಸ್ಥಿತಿ ಅಥವಾ ಮಾನವೀಯ ನೆಲೆಗಳಲ್ಲಿ ಜಾಮೀನು ಕೋರುವ ಅವಕಾಶವೂ ಇಲ್ಲದಂತಾಗುತ್ತದೆ ಎಂದು ದರ್ಶನ್ ಪರ ವಕೀಲರು ಸುಪ್ರೀಂಕೋರ್ಟ್ ಗಮನಕ್ಕೆ ತಂದಿದ್ದಾರೆ.
ದೀರ್ಘಾವಧಿಯ ಬಂಧನವನ್ನು ಕಾಲಕಾಲಕ್ಕೆ ನ್ಯಾಯಾಲಯ ಪರಿಶೀಲಿಸಬೇಕೆಂಬುದು ನ್ಯಾಯಸಮ್ಮತ ತತ್ವವಾಗಿದ್ದು, ಪ್ರಸ್ತುತ ಆದೇಶವು ವಿಶೇಷ ಸಂದರ್ಭಗಳಲ್ಲಿ ಜಾಮೀನು ಕೋರುವ ಅವಕಾಶವನ್ನೇ ನಿರ್ಬಂಧಿಸುತ್ತಿದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ, ತುರ್ತು ವೈದ್ಯಕೀಯ ಅಥವಾ ಮಾನವೀಯ ಕಾರಣಗಳಿಗೆ ಜಾಮೀನು ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸುವಂತೆ ದರ್ಶನ್ ಮನವಿ ಮಾಡಿದ್ದಾರೆ.

















