ಟ್ರೇಲರ್​ ಅನಾವರಣಗೊಳಿಸಲಿದ್ದಾರೆ ದರ್ಶನ್ – ಬಿ.‌ಸಿ ಪಾಟೀಲ್ ‘ಗರಡಿ’ ಚಿತ್ರಕ್ಕೆ ಚಾಲೆಂಜಿಂಗ್​ ಸ್ಟಾರ್​ ಸಾಥ್

‘ಗರಡಿ’….. ಈ ಹೆಸರು ಕೇಳುತ್ತಿದ್ದಂತೆ ವರನಟ ಡಾ. ರಾಜ್​​ಕುಮಾರ್ ಅಭಿನಯದ ಮಯೂರ ಹಾಗೂ ಸಾಹಸಸಿಂಹ ಡಾ. ವಿಷ್ಣುವರ್ಧನ್ ನಟನೆಯ ನಾಗರಹಾವು ಸಿನಿಮಾಗಳು ನೆನಪಾಗುತ್ತವೆ. ಈ ಎರಡೂ ಚಿತ್ರಗಳು ಗರಡಿ ಮನೆಗಳಲ್ಲಿ ಕಸರತ್ತು ಮಾಡುವ ಕುಸ್ತಿ ಪಟುಗಳು / ಪೈಲ್ವಾನ್​ಗಳ ಕಥೆಯನ್ನು ಒಳಗೊಂಡಿತ್ತು‌.

ಇದೀಗ, ಗರಡಿ ಸಿನಿಮಾ ಮೂಲಕ ನಿರ್ದೇಶಕ ಯೋಗರಾಜ್ ಭಟ್ ಅವರು ನಮ್ಮ ದೇಸಿ ಕ್ರೀಡೆ ಕುಸ್ತಿ ಬಗ್ಗೆ ಹೇಳೋದಕ್ಕೆ ಸಜ್ಜಾಗಿದ್ದಾರೆ. ಈಗಾಗಲೇ ಹಾಡುಗಳಿಂದಲೇ ಕುತೂಹಲ ಹೆಚ್ಚಿಸಿರುವ ಗರಡಿ ಚಿತ್ರಕ್ಕೀಗ ಸ್ಯಾಂಡಲ್​ವುಡ್​ನ ಡಿ ಬಾಸ್ ದರ್ಶನ್ ಸಾಥ್ ಸಿಕ್ಕಿದೆ.’ಗರಡಿ’ ಟ್ರೇಲರ್​ ಅನ್ನು ನವೆಂಬರ್ 1ರಂದು ನಟ ದರ್ಶನ್​​​ ಅನಾವರಣಗೊಳಿಸಲಿದ್ದಾರೆ.

ಪ್ರಮುಖ ಪಾತ್ರವೊಂದರಲ್ಲಿ ಡಿ ಬಾಸ್ ನಟನೆ: ನವೆಂಬರ್ 1, ಕನ್ನಡ ರಾಜ್ಯೋತ್ಸವದಂದು ಸಂಜೆ 6.30ಕ್ಕೆ ರಾಣೆಬೆನ್ನೂರಿನ ಮುನ್ಸಿಪಲ್ ಗ್ರೌಂಡ್​​ನಲ್ಲಿ ನಡೆಯಲಿದೆ. ಸಮಾರಂಭಕ್ಕೆ ತಯಾರಿಗಳು ನಡೆಯುತ್ತಿವೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಟ್ರೇಲರ್ ಬಿಡುಗಡೆ ಮಾಡುವ ಮೂಲಕ ಗರಡಿ ಸಿನಿಮಾಗೆ ಸಾಥ್ ನೀಡಲಿದ್ದಾರೆ. ಅಷ್ಟೇ ಅಲ್ಲ, ಈ ಚಿತ್ರದಲ್ಲಿ ದರ್ಶನ್ ಕೂಡ ಪ್ರಮುಖ ಪಾತ್ರವೊಂದರಲ್ಲಿ ಅಭಿಮಾನಿಗಳಿಗೆ ದರ್ಶನ ಕೊಡಲಿದ್ದಾರೆ.

ಇನ್ನೂ ಈ ಚಿತ್ರದ ಹೆಸರೇ ಹೇಳುವ ಹಾಗೇ, ಪೈಲ್ವಾನ್​​ಗಳ ಬಗ್ಗೆ ಸಾಕಷ್ಟು ಅಧ್ಯಯನ ಮಾಡಿ ನಿರ್ಮಾಣ ಮಾಡುತ್ತಿರುವ ಸಿನಿಮಾ. ನಟ‌ ಸೂರ್ಯ ಹಾಗೂ ಸೋನಾಲ್ ಮಾಂಟೆರೊ ಮತ್ತು ಕೌರವ ಬಿ.ಸಿ.ಪಾಟೀಲ್ ಅಲ್ಲದೇ, ರವಿಶಂಕರ್, ಬಲ ರಾಜವಾಡಿ, ಚೆಲುವರಾಜು, ರಾಘವೇಂದ್ರ, ಸೂರಜ್ ಬೇಲೂರ್, ಕಾಮಿಡಿ ಕಿಲಾಡಿಗಳು ನಯನ, ತ್ರಿವೇಣಿ, ರವಿಚೇತನ್, ತೇಜಸ್ವಿನಿ ಪ್ರಕಾಶ್, ನಯನ ಸೇರಿದಂತೆ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ನಿಶ್ವಿಕಾ ನಾಯ್ಡು ಕೂಡ ಸ್ಪೆಷಲ್ ಸಾಂಗ್​ಗೆ ಸ್ಟೆಪ್​ ಹಾಕಿದ್ದಾರೆ. ಇತ್ತೀಚೆಗೆ ಗರಡಿ ಚಿತ್ರವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಳಿ ಯಾವುದೇ ಕಟ್ಸ್ ಇಲ್ಲದೇ ಯು/ಎ ಸರ್ಟಿಫಿಕೇಟ್ ನೀಡಿದೆ‌.

ಸೌಮ್ಯ ಫಿಲ್ಮ್ಸ್ ಹಾಗೂ ಕೌರವ ಪ್ರೊಡಕ್ಷನ್ ಹೌಸ್ ಲಾಂಛನದಲ್ಲಿ ವನಜಾ ಪಾಟೀಲ್ ಈ ಚಿತ್ರವನ್ನು ನಿರ್ಮಿಸಿದ್ದು, ಸೃಷ್ಟಿ ಪಾಟೀಲ್ ಕಾರ್ಯಕಾರಿ ನಿರ್ಮಾಪಕಿ. ಚಿತ್ರಕ್ಕೆ ವಿ. ಹರಿಕೃಷ್ಣ ಅವರ ಸುಮಧುರ ಸಂಗೀತ, ನಿರಂಜನ್ ಬಾಬು ಅವರ ಛಾಯಾಗ್ರಹಣ, ಕೌರವ ವೆಂಕಟೇಶ್ ಅವರ ಸಾಹಸ ನಿರ್ದೇಶನ ಹಾಗೂ ಹೊಸ್ಮನೆ ಮೂರ್ತಿ ಅವರ ಕಲಾ ನಿರ್ದೇಶನವಿದೆ. ಚಿತ್ರದ ಮುಹೂರ್ತ ದಿನದಿಂದಲೂ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ವಿಚಾರಗಳಿಗೆ ಸೌಂಡ್ ಮಾಡುತ್ತಿರುವ ಗರಡಿ ಚಿತ್ರ ಈ ವರ್ಷದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದು. ಏಕೆಂದರೆ ಕೌರವ ಖ್ಯಾತಿಯ ಬಿ.ಸಿ ಪಾಟೀಲ್ ತಮ್ಮ ರಾಜಕೀಯದಿಂದ ಬಿಡುವು ಮಾಡಿಕೊಂಡು, ಬಹಳ ಇಷ್ಟಪಟ್ಟು ಅಭಿನಯಿಸಿರುವ ಸಿನಿಮಾವಿದು. ಈ ಹಿನ್ನೆಲೆಯಲ್ಲಿ, ಚಿತ್ರದ ಟ್ರೇಲರ್​ ರಿಲೀಸ್​ ಈವೆಂಟ್​ ಅನ್ನು ಬಿ.ಸಿ ಪಾಟೀಲ್ ಅವರ ಹಿರೇಕೆರೂರು ಊರಿನ ಸಮೀಪದಲ್ಲಿ ಬರುವ‌ ರಾಣೆಬೆನ್ನೂರಿನಲ್ಲಿ ಆಯೋಜಿಸಲು ಸಿದ್ಧತೆಗಳು ನಡೆಯುತ್ತಿವೆ. ಕನ್ನಡ ರಾಜ್ಯೋತ್ಸವದಂದು ಗರಡಿ ಚಿತ್ರದ ಟ್ರೇಲರ್​ ಬಿಡುಗಡೆ ಆಗಲಿದ್ದು, ಬೆರಳೆಣಿಕೆ ದಿನಗಳ ಅಂತರದಲ್ಲಿ ಅಂದರೆ ನವೆಂಬರ್ 10ರಂದು ‘ಗರಡಿ’ ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ.