ಮತ್ತೆ ಒಂದಾದ ಡಾರ್ಲಿಂಗ್ ಕೃಷ್ಣ-ಮಿಲನಾ ನಾಗರಾಜ್ ಜೋಡಿ: ಮಿ. ಬ್ಯಾಚುಲರ್ ಚಿತ್ರದಲ್ಲಿ ಸಿನಿರಸಿಕರಿಗೆ ಮಾಡಲಿದ್ದಾರೆ ಮೋಡಿ

‘ಲವ್ ಮಾಕ್ಟೇಲ್’ ಸಿನಿಮಾ ನೋಡಿದವರಿಗೆ ಈ ಜೋಡಿ ಚಿರಪರಿಚಿತ. ಸಿದ್ದಸೂತ್ರದ ಚಿತ್ರಗಳನ್ನು ಬಿಟ್ಟು ಹೊಸದಾದ ಪರಿಕಲ್ಪನೆಯೊಂದಿಗೆ ಬಂದಿದ್ದ ಲವ್ ಮಾಕ್ಟೇಲ್ ಚಿತ್ರವನ್ನು ಮೆಚ್ಚದವರು ಕಡಿಮೆ. ಡಾರ್ಲಿಂಗ್’ ಕೃಷ್ಣ ಮತ್ತು ಮಿಲನಾ ನಾಗರಾಜ್‌ ಜೋಡಿ ಈ ಚಿತ್ರದಲ್ಲಿ ಮೋಡಿ ಮಾಡಿತ್ತು. ಈ ಚಿತ್ರದ ಯಶಸ್ಸಿನ ಬಳಿಕ ‘ಲವ್‌ ಮಾಕ್ಟೇಲ್ 2’ ಕೂಡಾ ಮಾಡಿತ್ತು ಈ ಜೋಡಿ. ಇದೀಗ ‘ಮಿ. ಬ್ಯಾಚುಲರ್’ ಎನ್ನುವ ಹೊಸ ಚಿತ್ರದಲ್ಲಿ ಈ ಜೋಡಿ ಮತ್ತೊಮ್ಮೆ ಮೋಡಿ ಮಾಡಲು ಸಜ್ಜಾಗಿದೆ.

ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಚಿತ್ರದ ನಾಯಕ ‘ಡಾರ್ಲಿಂಗ್’ ಕೃಷ್ಣ, ಈ ಚಿತ್ರದ ಮೇಲೆ ನನಗೆ ವಿಶೇಷ ಪ್ರೀತಿ ಇದೆ. ನಾನು ಈ ಚಿತ್ರವನ್ನು ಒಪ್ಪಿಕೊಂಡ ನಂತರ ನಿರ್ಮಾಪಕನಾಗಿ ‘ಲವ್ ಮಾಕ್ಟೇಲ್’ ಸಿನಿಮಾ ಮಾಡಿದೆ. ಈ ಚಿತ್ರದ ಸಂಭಾವನೆಯಿಂದಲೇ ನಾನು ‘ಲವ್ ಮಾಕ್ಟೇಲ್’ ಶುರು ಮಾಡಿದ್ದು. ಹಾಗಾಗಿ ನನಗೆ ಈ ಚಿತ್ರದ ಮೇಲೆ ವಿಶೇಷ ಪ್ರೀತಿ. ಇನ್ನುಈ ಚಿತ್ರದ ಬಗ್ಗೆ ‌ಹೇಳಬೇಕೆಂದರೆ ನಿರ್ದೇಶಕ ನಾಯ್ಡು ಬಂದರ್ ಅವರು ಒಳ್ಳೆಯ ಕಥೆ ಆಯ್ಕೆ ಮಾಡಿಕೊಂಡು ಸಿನಿಮಾ ಮಾಡಿದ್ದಾರೆ. ಅವರು ಕಥೆ ಹೇಳಲು ಬಂದಾಗಲೇ, ಕಥೆ ಕೇಳಿ ಸಾಕಷ್ಟು ಖುಷಿ ಪಟ್ಟಿದ್ದೆ. ನಾನು ಇಲ್ಲಿಯವರೆಗೆ ಯಾವ ಚಿತ್ರದಲ್ಲೂ ಹಾಕಿರದಷ್ಟು ಬಟ್ಟೆಗಳನ್ನು ಈ ಚಿತ್ರದಲ್ಲಿ ಹಾಕಿದ್ದೇನೆ. ಅದಕ್ಕೆ ನಿರ್ದೇಶಕರೇ ಕಾರಣ. ಅವರಿಗೆ ಸಾಕಷ್ಟು ಅಭಿರುಚಿ ಇದೆ. ಮಿಲನಾ ನಾಗರಾಜ್ ಅವರು ಈ ಚಿತ್ರದ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ. ನಿಮಿಕಾ ರತ್ನಾಕರ್ ಸೇರಿದಂತೆ ಎಲ್ಲಾ ಕಲಾವಿದರ ಅಭಿನಯ ಹಾಗೂ ತಂತ್ರಜ್ಞರ ಕಾರ್ಯವೈಖರಿ ಚೆನ್ನಾಗಿದೆ. ಎಂದಿದ್ದಾರೆ.

ನಟಿ ಮಿಲನಾ ನಾಗರಾಜ್ ಕೂಡಾ ಚಿತ್ರದ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ, ನಿರ್ದೇಶಕ ನಾಯ್ಡು ಅವರು ಈ ಚಿತ್ರದ ಕಥೆ ಹೇಳಿದಾಗಲೇ ಇಷ್ಟವಾಯಿತು. ನಾನು ಈ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಅಭಿನಯಿಸಿದ್ದೇನೆ. ಚಿತ್ರಕ್ಕೆ ಒಳ್ಳೆಯದಾಗಲಿ ಎಂದರು.

ನಿಮಿಕಾ ರತ್ನಾಕರ್‌ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ನಾಯ್ಡು ಬಂದರ್ ಅವರ ನಿರ್ದೇಶನದ ಮೊದಲ ರೊಮ್ಯಾಂಟಿಕ್ ಎಂಟರ್‌ಟೈನರ್ ಚಲನಚಿತ್ರ ಇದಾಗಿದೆ. ಇದಕ್ಕೂ ಮುನ್ನ ಅವರು ನಿರ್ದೇಶಕ ಪುರಿ ಜಗನ್ನಾಥ್ ಅವರ ಬಳಿ ಕೆಲಸ ಮಾಡುತ್ತಿದ್ದರು. ಶ್ರೀನಿವಾಸ್, ಹನುಮಂತ ರಾವ್ ಹಾಗೂ ಸ್ವರ್ಣಲತಾ ನಿರ್ಮಾಪಕರಾಗಿದ್ದಾರೆ. ಮಣಿಕಾಂತ್ ಕದ್ರಿ ಸಂಗೀತ ನಿರ್ದೇಶವಿದೆ. ಶ್ರೀ ಕ್ರೇಜಿಮೈಂಡ್ಸ್ ಛಾಯಾಗ್ರಹಣ ಮತ್ತು ಸಂಕಲನ ವಿಭಾಗದಲ್ಲಿ ದುಡಿದಿದೆ.