ಬೆಳಗಾವಿ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಅಗ್ನಿಪಥ್ ಯೋಜನೆಯಡಿ ಸಾಂಬ್ರಾ ಏರಮನ್ ತರಬೇತಿ ಶಾಲೆಯಲ್ಲಿ 22 ವಾರ 2,127 ಪುರುಷರು, 153 ಮಹಿಳೆಯರು ಸೇರಿದಂತೆ 2,280 ಅಗ್ನಿವೀರವಾಯುಗಳು ತರಬೇತಿ ಪೂರ್ಣಗೊಳಿಸಿದ್ದಾರೆ. ಇಂದು ಅಗ್ನಿವೀರವಾಯುಗಳ ಆಕರ್ಷಕ ಪಥಸಂಚಲನ ಎಲ್ಲರ ಗಮನ ಸೆಳೆಯಿತು.
ಅದರಲ್ಲೂ ಅಗ್ನಿಪಥ್ ಯೋಜನೆಯಡಿ ದೇಶದಲ್ಲೆ ತರಬೇತಿ ಪೂರ್ಣಗೊಳಿಸಿದ ಮೊದಲ ಮಹಿಳಾ ತಂಡ ಎಂಬ ಖ್ಯಾತಿಗೆ ಈ ಶಿಬಿರಾರ್ಥಿಗಳು ಪಾತ್ರರಾದರು.ಬೆಳಗಾವಿಯ ಸಾಂಬ್ರಾದ ಏರ್ಮನ್ ತರಬೇತಿ ಶಾಲೆಯಲ್ಲಿ ಪುರುಷ ಅಗ್ನಿವೀರವಾಯುಗಳ ಎರಡನೇ ತಂಡದ ಮತ್ತು ಮಹಿಳಾ ಅಗ್ನಿವೀರವಾಯುಗಳ ಮೊದಲ ತಂಡದ ನಿರ್ಗಮನ ಪಥಸಂಚಲನ ಯಶಸ್ವಿಯಾಗಿ ಜರುಗಿತು. ಅಗ್ನಿವೀರವಾಯುಗಳ ಸಾಹಸ ಪ್ರದರ್ಶನ ಕಂಡು ಕುಟುಂಬಸ್ಥರು ಪುಳುಕಿತರಾದರು.ಬೆಳಗಾವಿಯಲ್ಲಿ ಅಗ್ನಿವೀರವಾಯುಗಳ ಆಕರ್ಷಕ ಪಥಸಂಚಲನ, ಬೆಳಗಾವಿಯ ಸಾಂಬ್ರಾ ಏರ್ಮನ್ನಲ್ಲಿ ಅಗ್ನಿವೀರವಾಯುಗಳ ನಿರ್ಗಮನ ಪಥಸಂಚಲನ ಯಶಸ್ವಿ.
ಬಳಿಕ ಅಗ್ನಿವೀರರನ್ನು ಉದ್ದೇಶಿಸಿ ಮಾತನಾಡಿದ ಆಫೀಸರ್ ಕಮಾಂಡಿಂಗ್ ಇನ್ ಚೀಫ್ ಏರ್ ಮಾರ್ಷಲ್ ಆರ್. ರಾಧಿಶ್, ಪ್ರಸ್ತುತ ಜಾಗತಿಕ ರಕ್ಷಣಾ ವ್ಯವಸ್ಥೆಗೆ ಸವಾಲು ಹೆಚ್ಚುತ್ತಿವೆ. ಸಧ್ಯದ ಕಾಲಘಟ್ಟಕ್ಕೆ ಅನುಗುಣವಾಗಿ ಜ್ಞಾನ, ವೃತ್ತಿಕೌಶಲ ಬೆಳೆಸಿಕೊಳ್ಳಬೇಕು. ಈ ಮೂಲಕ ನಾವೂ ಬದಲಾವಣೆಗೆ ಕಾರಣವಾಗಬೇಕು. ಜಗತ್ತಿನ ನಾಲ್ಕನೇ ದೊಡ್ಡ ವಾಯುಪಡೆಯಾದ ಭಾರತೀಯ ವಾಯುಪಡೆಗೆ ತಮ್ಮ ಮಕ್ಕಳನ್ನು ಸೇರಿಸಲು ಮುಕ್ತ ಮನಸ್ಸಿನಿಂದ ಸಹಕರಿಸಿದ ಪಾಲಕರ ಕಾರ್ಯ ಶ್ಲಾಘನೀಯ ಎಂದರು.
ಅಗ್ನಿಪಥ ಯೋಜನೆಯಡಿ ಬೇಸಿಕ್ ತರಬೇತಿ: ಅಗ್ನಿಪಥ ಯೋಜನೆಯಡಿ ನಮ್ಮಲ್ಲಿ ಬೇಸಿಕ್ ತರಬೇತಿ ನೀಡಲಾಗುತ್ತಿದೆ. ದೈಹಿಕ ಮಾತ್ರವಲ್ಲ, ಬೌದ್ಧಿಕ ಮತ್ತು ನೈತಿಕ ಮೌಲ್ಯಗಳನ್ನು ಶಿಬಿರಾರ್ಥಿಗಳಿಗೆ ಕಲಿಸಲಾಗುತ್ತಿದೆ. ಇಲ್ಲಿಂದ ವಿವಿಧ ಟ್ರೇಡ್ಗಳಿಗೆ ಅನುಸಾರವಾಗಿ ಮತ್ತೊಂದು ಹಂತದ ತರಬೇತಿ ಪಡೆದ ಬಳಿಕ ಅಗ್ನಿವೀರರು, ದೇಶಸೇವೆಯಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ ಎಂದು ಆರ್.ರಾಧಿಶ್ ಹೇಳಿದರು. ಇದೇ ವೇಳೆ ಶಿಬಿರ ಪೂರ್ಣಗೊಳಿಸಿದ ಮಹಿಳಾ ಅಗ್ನಿವೀರರು ಕುಣಿದು ಕುಪ್ಪಳಿಸಿ, ಸಂಭ್ರಮಿಸಿದರು. ತಮ್ಮ ಮಕ್ಕಳ ಸಾಧನೆ ಕಂಡು ಪಾಲಕರು ಈ ವೇಳೆ ಭಾವುಕರಾದರು. ಅಪ್ಪಿಕೊಂಡು ಖುಷಿ ಪಟ್ಟರು. ಅಲ್ಲದೇ ತಮ್ಮ ಮಕ್ಕಳು ಭಾರತೀಯ ವಾಯುಸೇನೆ ಸೇರುತ್ತಿರುವುದಕ್ಕೆ ಹೆಮ್ಮೆ ಪಟ್ಟರು.
ಅಗ್ನಿವೀರವಾಯು ಮಹಿಳೆ ಮತ್ತು ಪುರುಷರಿಗೆ ಟ್ರೋಫಿ ವಿತರಣೆ: ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಆಫೀಸರ್ ಕಮಾಂಡಿಂಗ್ ಇನ್ ಚೀಫ್ ಏರ್ ಮಾರ್ಷಲ್ ಆರ್. ರಾಧಿಶ್ ಈ ತಂಡಗಳಿಂದ ಗೌರವ ವಂದನೆ ಸ್ವೀಕರಿಸಿದರು. ಬಳಿಕ ತರಬೇತಿ ಸಮಯದಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಅಗ್ನಿವೀರವಾಯು ಮಹಿಳೆಯರು ಮತ್ತು ಪುರುಷರಿಗೆ ಟ್ರೋಫಿ ವಿತರಿಸಿದರು.