ಪೆರ್ಡೂರಿನಲ್ಲಿ ನೃತ್ಯ ಹಾಗೂ ಯಕ್ಷಗಾನ ತರಗತಿ ಆರಂಭ.

ಪೆರ್ಡೂರು: ಗ್ರಾಮೀಣ ಪ್ರದೇಶದಲ್ಲಿ ಆದೆಷ್ಟೋ ಪ್ರತಿಭೆಗಳು ಸೂಕ್ತ ತರಬೇತಿ ಇಲ್ಲದೆ ಅವಕಾಶ ವಂಚಿತರಾಗುತ್ತಿದ್ದಾರೆ. ಕಳೆದ 11 ವರ್ಷಗಳಿಂದ ಅಂತಹ ಪ್ರತಿಭೆಗಳನ್ನು ಗುರುತಿಸಿ ವೇದಿಕೆ ಕಲ್ಪಿಸುತ್ತಿರುವ ಚಾಣಕ್ಯ ಸಂಸ್ಥೆ ಇದೀಗ ಪೆರ್ಡೂರಿನಲ್ಲಿ ತರಬೇತಿ ನೀಡಲು ಮುಂದಾಗಿರುವುದು ಶ್ಲಾಘನೀಯ ಎಂದು ಪೆರ್ಡೂರು ಬಂಟರ ಸಂಘದ ಅಧ್ಯಕ್ಷ ಕೆ.ಶಾಂತರಾಮ ಸೂಡ ಹೇಳಿದರು.

ಅವರು ಚಾಣಕ್ಯ ಶಿಕ್ಷಣ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದ ಆಶ್ರಯದಲ್ಲಿ ಪೆರ್ಡೂರು ಕುಂಬಾರರ ಗುಡಿ ಕೈಗಾರಿಕಾ ಸಹಕಾರಿ ಸಂಘದ ಪ್ರಧಾನ ಕಚೇರಿ ಕಟ್ಟಡದ ಅನಂತ ಸೌರಭ ಸಭಾಂಗಣದಲ್ಲಿ ಆರಂಭಗೊಂಡ ನೃತ್ಯ ಹಾಗೂ ಯಕ್ಷಗಾನ ತರಗತಿಯನ್ನು ಉದ್ಘಾಟಿಸಿ ಮಾತನಾಡಿದರು.

ಕನಸು ನನಸಾಗಿಸಲು ಅವಕಾಶ:
ಪೋಷಕರು ತಮ್ಮ ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಹೊರ ತಂದು ವೇದಿಕೆಗಳಲ್ಲಿ ಕಾಣಿಸಿಕೊಳ್ಳಬೇಕು ಎಂಬ ಕನಸು ಇದ್ದರೆ ಅದನ್ನು ಈಡೇರಿಸಲು ಚಾಣಕ್ಯ ಸಂಸ್ಥೆ ಅವಕಾಶ ಮಾಡಿಕೊಡುತ್ತಿದೆ.ಹೆತ್ತವರು ಇಂತಹ ತರಬೇತಿಗಳಿಗೆ ಮಕ್ಕಳನ್ನು ಕಳುಹಿಸುವುದರ ಮೂಲಕ ಕನಸನ್ನು ನನಸಾಗಿಸಬಹುದು ಎಂದು ಕುಂಬಾರರ ಗುಡಿಕೈಗಾರಿಕಾ ಸಹಕಾರಿ ಸಂಘದ ಅಧ್ಯಕ್ಷ ಸಂತೋಷ ಕುಲಾಲ್ ಪಕ್ಕಾಲು ಹೇಳಿದರು.

ತರಬೇತಿ ಜೊತೆಗೆ ವೇದಿಕೆ: ಚಾಣಕ್ಯ ಸಂಸ್ಥೆ ಕಳೆದ 11 ವರ್ಷಗಳಿಂದ ನೂರಾರು ಪ್ರತಿಭೆಗಳನ್ನು ನಾಡಿಗೆ ಪರಿಚಯಿಸಿದೆ. ಇಲ್ಲಿ ಕೇವಲ ತರಬೇತಿ ಮಾತ್ರ ಅಲ್ಲ . ಬೇರೆ ಬೇರೆ ಕಡೆ ವೇದಿಕೆ ಕಲ್ಪಿಸಿ ಟಿವಿ ರಿಯಾಲಿಟಿ ಶೋಗಳಲ್ಲಿ ಅವಕಾಶ ಪಡೆದುಕೊಂಡ ಪ್ರತಿಭೆಗಳು ಇಲ್ಲಿದ್ದಾರೆ. ಪೆರ್ಡೂರಿನ ಹೆಚ್ಚಿನ ಪೋಷಕರ ವಿನಂತಿಯ ಮೇರೆಗೆ ಇದೀಗ ಪೆರ್ಡೂರಿನಲ್ಲಿ ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘದ ಅಧ್ಯಕ್ಷ ಸಂತೋಷ್ ಕುಲಾಲ್ ಅವರ ವಿಶೇಷ ಸಹಕಾರದಿಂದ ತರಗತಿ ಆರಂಭ ಮಾಡಿದ್ದು
ಪ್ರತಿ ಭಾನುವಾರ ಬೆಳಿಗ್ಗೆ 9ರಿಂದ ನೃತ್ಯ ಹಾಗೂ 11.30ರಿಂದ ಯಕ್ಷಗಾನ ತರಗತಿ ನಡೆಯಲಿದೆ. ಆಂಜನೇಯ ದಿನಗಳಲ್ಲಿ ಹಂತ ಹಂತವಾಗಿ ವಿವಿಧ ತರಗತಿಗಳನ್ನು ನಡೆಸುವ ಯೋಜನೆ ಇದೆ. ಆಸಕ್ತರು ಸದುಪಯೋಗ ಪಡೆದುಕೊಳ್ಳಬಹುದು ಎಂದು ಸಂಸ್ಥೆಯ ಅಧ್ಯಕ್ಷ ಉದಯಕುಮಾರ್ ಶೆಟ್ಟಿ ಹೇಳಿದರು.

ಸಮಾರಂಭದಲ್ಲಿ ಪೆರ್ಡೂರು ಅನಂತಪದ್ಮನಾಭ ದೇವಳದ ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ರಾಜ್‌ಕುಮಾರ್ ಶೆಟ್ಟಿ, ರಾಮದಾಸ್ ನೈಕ್, ಗೆಳೆಯರ ಬಳಗದ ಗೌರವಾಧ್ಯಕ್ಷ ಸತೀಶ್ ಶೆಟ್ಟಿ ಕುತ್ಯಾರುಬೀಡು, ಪೆರ್ಡೂರು ಆಂಗ್ಲಮಾದ್ಯಮ ಪ್ರೌಢಶಾಲಾ ಶಿಕ್ಷಕ ನಿಶ್ಚಿತ್, ಯಕ್ಷಗಾನ ಗುರು ಸುಬ್ರಹ್ಮಣ್ಯ ಪ್ರಸಾದ್, ನೃತ್ಯ ಗುರು ಹರೀಶ್, ಪ್ರಸನ್ನ ಮುನಿಯಾಲು, ಸುಕೇಶ್‌ಕುಲಾಲ್, ನಿತ್ಯಾನಂದ ಭಟ್, ಪೆರ್ಡೂರು ಯುವಕ ಸಂಘದ ಸಂದೀಪ್ ಶೆಟ್ಟಿ , ಬಂಟರ ಸಂಘದ ವಸಂತ ಶೆಟ್ಟಿ ಮೊದಲಾದವರಿದ್ದರು.