ಖಾಸಗಿ ವಾಹಿನಿಯೊಂದಲ್ಲಿ ನಡೆಯುವ ಅದ್ಧೂರಿ “ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಎನ್ನುವ ರಿಯಾಲಿಟಿ ಶೋನಲ್ಲಿ ನಮಗೆ ಮೋಸವಾಗಿದೆ ಎಂದು ರಿಯಾಲಿಟಿ ಶೋ ನಲ್ಲಿ ಭಾಗವಹಿಸಿದ ಸ್ಪರ್ಧಾಳು ಅನ್ವಿಷಾ, ಪ್ರೇಕ್ಷಿತ್ ಮತ್ತವರ ಹೆತ್ತವರು ಉಡುಪಿ Xpress ಗೆ ತಮ್ಮ ಅಳಲು ತೋಡಿಕೊಂಡಿದ್ದಾರೆ. ಅವರ ಕತೆ ಖಾಸಗಿ ವಾಹಿನಿಗಳ ರಿಯಾಲಿಟಿ ಶೋ ಗಳಿಗೆ ಮರುಳಾಗುವವರಿಗೆ ಪಾಠದಂತಿದೆ.
“ಜೀ ಕನ್ನಡ ವಾಹಿನಿಯ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ಆರಂಭದಿಂದಲೂ ಉತ್ತಮ ಪ್ರದರ್ಶನ ಕೊಡುತ್ತಿರುವ ಅನ್ವಿಷಾ ಹಾಗೂ ಪ್ರೇಕ್ಷಿತ್ ಜೋಡಿಯನ್ನು ಡಿ.೨೧ ರಂದು ಚಿತ್ರದುರ್ಗದಲ್ಲಿ ನಡೆದ ಫೈನಲ್ ನ ಮೊದಲ ಸುತ್ತಿನಲ್ಲಿ ತೆಗೆದುಹಾಕಲಾಗಿದೆ ಯಾಕೆ ತೆಗೆದು ಹಾಕಿದ್ದೀರಿ ಎಂದು ಕೇಳಿದರೆ ಚಾನೆಲ್ ಹಾಗೂ ರಿಯಾಲಿಟಿ ಶೋ ಸಂಯೋಜನಕರ ಬಳಿ ಉತ್ತರವಿಲ್ಲ” ಎಂದು ಅನ್ವಿಷ್ ಹಾಗೂ ಪ್ರೇಕ್ಷಿತ್ ಅವರ ಹೆತ್ತವರು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿಯೂ ತಮ್ಮ ಆಕ್ರೋಶ ತೋಡಿಕೊಂಡಿದ್ದಾರೆ.
ಈ ಹಿಂದೆಯೂ ಚಾನೆಲ್ ನಿಂದ ಮೋಸ: ಪ್ರೇಕ್ಷಕರ ಆಕ್ರೋಶ:
ಈ ಹಿಂದೆಯೂ ಕೆಲವೊಂದು ರಿಯಾಲಿಟಿ ಶೋಗಳನ್ನು ನಡೆಸಿದ ಈ ವಾಹಿನಿಯು ನಿಜವಾದ ಪ್ರತಿಭೆಗಳಿಗೆ ಮನ್ನಣೆ ಕೊಡುತ್ತಲೇ ಇಲ್ಲ.ಇದೀಗ ನಿಜವಾಗಿಯೂ ರಿಯಾಲಿಟಿ ಶೋನಲ್ಲಿ ಜನಗಳ ಮನಗೆಲ್ಲುವಂತೆ ಪ್ರದರ್ಶನ ನೀಡಿದ ಅನ್ವಿಷಾ ಮತ್ತು ಪ್ರೇಕ್ಷಿತ್ ಅವರಿಗೂ ಇದೇ ರೀತಿಯಾಗಿದೆ.ಇತರ ಸ್ಪರ್ಧಾಳುಗಳನ್ನು ಓಲೈಸಲು ಚಾನೆಲ್ ಹೊರಟ್ಟಿದ್ದು ನಮ್ಮ ಮಕ್ಕಳ ಪ್ರತಿಭೆಗೆ ಮನ್ನಣೆಯೇ ಸಿಕ್ಕಿಲ್ಲ. ಚಾನೆಲ್ ಮೇಲಿನ ನಂಬಿಕೆಯಿಂದ ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಮಕ್ಕಳನ್ನು ಪ್ರೇರೇಪಿಸುತ್ತೇವೆ. ಆದರೆ ಚಾನಲ್ ನವರು ಯಾರನ್ನೋ ಓಲೈಸಲೋ ಅಥವಾ ದುಡ್ಡಿನ ಆಸೆಗೋ, ಮಾರ್ಕೆಟಿಂಗಾಗಿಯೋ ಪ್ರಾಮಾಣಿಕ ಪ್ರತಿಭೆಗಳಿಗೆ ಬೆಲೆ ಕೊಡುವುದೇ ಇಲ್ಲ.ಇನ್ನು ಮುಂದೆ ಮಕ್ಕಳನ್ನು ರಿಯಾಲಿಟಿ ಶೊ ಗಳಿಗೆ ಕಳುಹಿಸುವ ಮುನ್ನ ಸ್ವಲ್ಪ ಯೋಚನೆ ಮಾಡಿ ಎಂದು ಅನ್ವಿಷಾ ಹಾಗೂ ಪ್ರೇಕ್ಷಿತ್ ಹೆತ್ತವರು ತಮ್ಮ ಆಕ್ರೋಶ ಹಾಗೂ ಅಳಲು ತೋಡಿಕೊಂಡಿದ್ದಾರೆ. ಇದಕ್ಕೆ ಧ್ವನಿಯೆಂಬಂತೆ ಚಾನೆಲ್ ನ ಪ್ರೇಕ್ಷಕರೂ ಕೂಡ ಸಾಮಾಜಿಕ ಜಾಲತಾಣಗಳಲ್ಲಿಯೂ ನಿಜವಾದ ಪ್ರತಿಭೆಗಳಿಗೆ ಚಾನೆಲ್ ಮೋಸ ಮಾಡುತ್ತಿದೆ ಎನ್ನುವ ರೀತಿಯಲ್ಲಿ ಪೋಸ್ಟ್ ಗಳನ್ನು ಪ್ರಕಟಿಸಿದ್ದಾರೆ. ಚಾನೆಲ್ ನವರು ಇನ್ನಾದರೂ ತೆಗೆದು ಹಾಕಿದ್ದಕ್ಕೆ ಸ್ಪಷ್ಟವಾದ ಕಾರಣ ನೀಡಬೇಕು ಪ್ರತಿಭೆಗಳಿಗೆ ಮೋಸವಾಗೋದನ್ನು ತಪ್ಪಿಸಬೇಕು ಎಂದು ಸ್ಪರ್ಧಾಳುಗಳ ಹೆತ್ತವರು ಮನವಿ ಮಾಡಿದ್ದಾರೆ.