ಪಶ್ಚಿಮ ಘಟ್ಟಗಳ ಜೀವವೈವಿಧ್ಯಕ್ಕೆ ಹಾನಿ; ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ಕೇಂದ್ರದ ಬ್ರೇಕ್!

ಹೊಸದಿಲ್ಲಿ: ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯಲ್ಲಿ ಶರಾವತಿ ನದಿಗೆ ನಿರ್ಮಿಸಲು ಉದ್ದೇಶಿಸಿದ್ದ ರಾಜ್ಯ ಸರಕಾರದ ಪಂಪ್ಡ್ ಸ್ಟೋರೇಜ್‌ ಯೋಜನೆಯನ್ನು ರವಿವಾರ ಕೇಂದ್ರ ಸರಕಾರ ತಡೆ ಹಿಡಿದಿದೆ.

ಇದರಿಂದ ರಾಜ್ಯ ಸರಕಾರಕ್ಕೆ ಭಾರೀ ಹಿನ್ನಡೆಯಾಗಿದ್ದು, ಹಲವು ದಿನಗಳಿಂದ ಹೋರಾಟ ನಡೆಸುತ್ತಿರುವ ಪರಿಸರವಾದಿಗಳಿಗೆ ಹಾಗೂ ಸ್ಥಳೀಯ ನಿವಾಸಿಗಳಿಗೆ ಗೆಲುವು ಸಿಕ್ಕಂತಾಗಿದೆ.

ಪರಿಸರ ಸೂಕ್ಷ್ಮ ಪಶ್ಚಿಮ ಘಟ್ಟಗಳಲ್ಲಿ ಸುಮಾರು 54 ಹೆಕ್ಟೇರ್‌ ಅರಣ್ಯ ಭೂಮಿಯನ್ನು ಕರ್ನಾಟಕದ 2,000 ಮೆ.ವ್ಯಾಟ್‌ ಶರಾವತಿ ಪಂಪ್ಡ್ ಸ್ಟೋರೇಜ್‌ ಜಲವಿದ್ಯುತ್‌ ಯೋಜನೆಗೆ ತಿರುಗಿಸುವ ಪ್ರಸ್ತಾವನೆಗೆ ಅರಣ್ಯ ಸಲಹಾ ಸಮಿತಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿ, ಗಂಭೀರ ಪರಿಸರ ಕಾಳಜಿ ಮತ್ತು ಅರಣ್ಯ ಕಾನೂನು ಗಳ ಉಲ್ಲಂಘನೆಯನ್ನು ಎತ್ತಿ ಹಿಡಿದ ಅನಂತರ ಕೇಂದ್ರ ಸರಕಾರ ಯೋಜನೆ ತಡೆಹಿಡಿದು ಆದೇಶ ಹೊರಡಿಸಿದೆ.

ಆಕ್ಷೇಪವೇಕೆ?
ಯೋಜನಾ ಪ್ರದೇಶವು ಶರಾವತಿ ಕಣಿವೆಯ ಸಿಂಗಳೀಕ ಅಭಯಾರಣ್ಯ ದೊಳಗೆ ಇದೆ. ಇದು ಸಿಂಗಳೀಕ, ಚಿರತೆ, ಕರಡಿ, ಕಾಡು ನಾಯಿ ಮತ್ತಿತರ ಜೀವ ಸಂಕುಲದ ಆವಾಸ ಸ್ಥಾನವಾಗಿದೆ ಎಂದು ಸಲಹಾ ಸಮಿತಿ ತಿಳಿಸಿದೆ.ಈ ಯೋಜನೆಯ ಭಾಗವಾಗಿ 15 ಸಾವಿರಕ್ಕೂ ಹೆಚ್ಚು ಮರ ಕಡಿಯ ಬೇಕಾಗುತ್ತದೆ. ಈ ಪ್ರದೇಶವು ಉಷ್ಣವಲಯದ ನಿತ್ಯ ಹರಿದ್ವರ್ಣ, ಅರೆ ನಿತ್ಯಹರಿದ್ವರ್ಣ ಮತ್ತು ಶೋಲಾ ಹುಲ್ಲುಗಾವಲುಗಳ ಕಾಡು ಹೊಂದಿದೆ. ಇವು ಒಮ್ಮೆ ನಾಶವಾದರೆ ಪುನರ್‌ ಸ್ಥಾಪಿಸಲು ಅಸಾಧ್ಯವೆಂದೂ ಹೇಳಿದೆ.

ಯೋಜನೆಯಲ್ಲಿ 2 ಜಲಾ ಶಯಗಳು, 3.2 ಕಿ.ಮೀ. ಉದ್ದದ ಸುರಂಗಗಳು, 500 ಮೀ. ಆಳದ ವರೆಗೆ ಉತVನನ, ಸ್ಫೋಟ ನಡೆಸ ಲಾಗುತ್ತದೆ. ಈ ಪ್ರದೇಶ 3ನೇ ಭೂಕಂಪ ವಲಯದಲ್ಲಿದೆ. ಉತVನನ, ಸ್ಫೋಟದಿಂದ ಭೂಕುಸಿತ ಮತ್ತು ಮಣ್ಣಿನ ಸವೆತ ಉಂಟಾಗಬಹುದು ಎಂದು ಸಮಿತಿ ಎಚ್ಚರಿಕೆ ನೀಡಿದೆ.

ಏನಿದು ಯೋಜನೆ?
ಶರಾವತಿ ಪಂಪ್ಡ್ ಸ್ಟೋರೇಜ್‌ ಯೋಜನೆಯನ್ನು ವಿಶ್ವದ ಅತೀ ದೊಡ್ಡ ಬ್ಯಾಟರಿ ತಂತ್ರಜ್ಞಾನ ಎಂದು ಪರಿಗಣಿಸಲಾಗಿದೆ. 2 ಜಲಾಶಯಗಳ ನಡುವೆ ಇದನ್ನು ಕಾರ್ಯಗತ ಗೊಳಿಸಲಾಗುತ್ತದೆ. ಹೆಚ್ಚುವರಿ ವಿದ್ಯುತ್‌ ಲಭ್ಯವಿದ್ದಾಗ, ಕೆಳಗಿನ ಜಲಾಶಯದ ನೀರನ್ನು ಮೇಲಿನ ಜಲಾಶಯಕ್ಕೆ ಪಂಪ್‌ ಮಾಡಿ ಸಂಗ್ರಹಿಸಲಾಗುತ್ತದೆ. ವಿದ್ಯುತ್‌ ಬೇಡಿಕೆ ಹೆಚ್ಚಾದಾಗ ಆ ಸಂಗ್ರಹಿಸಿದ ನೀರನ್ನು ಬಳಸಿ ವಿದ್ಯುತ್‌ ಉತ್ಪಾದಿಸಿ ಗ್ರಿಡ್‌ಗೆ ಪೂರೈಸಲಾಗುತ್ತದೆ. ಈ ಯೋಜನೆಯು ಇಲ್ಲಿ 2,000 ಮೆಗಾ ವ್ಯಾಟ್‌ ವಿದ್ಯುತ್‌ ಉತ್ಪಾದಿಸುವ ಗುರಿ ಹೊಂದಿದೆ.