ಉಡುಪಿ: ಹತ್ರಾಸ್ ಅತ್ಯಾಚಾರ, ಕೊಲೆ ಪ್ರಕರಣ ಖಂಡಿಸಿ ದಲಿತ ಸಂಘಟನೆಯಿಂದ ಪ್ರತಿಭಟನೆ; ಆರೋಪಿಗಳನ್ನು ಗಲ್ಲಿಗೇರಿಸುವಂತೆ ಆಗ್ರಹ

ಉಡುಪಿ: ಉತ್ತರ ಪ್ರದೇಶದ ಹತ್ರಾಸ್ ದಲಿತ ಯುವತಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಆರೋಪಿಗಳನ್ನು ಗಲ್ಲಿಗೇರಿಸುವಂತೆ ಹಾಗೂ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರಾಜೀನಾಮೆ ನೀಡುವಂತೆ ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ನೇತೃತ್ವದಲ್ಲಿ ಗುರುವಾರ ಅಜ್ಜರಕಾಡು ಹುತಾತ್ಮ ಸ್ಮಾರಕದ ಬಳಿ ಪ್ರತಿಭಟನೆ ನಡೆಸಲಾಯಿತು.

ಇದೇ ವೇಳೆ ಸಿಎಂ ಯೋಗಿ ಆದಿತ್ಯನಾಥ್ ಪ್ರತಿಕೃತಿಗೆ ದಹಿಸಿ ಪ್ರತಿಭಟನಾಕಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಚಿಂತಕ, ಹೋರಾಟಗಾರ ಹರ್ಷಕುಮಾರ್ ಕುಗ್ವೆ, ಸಂತ್ರಸ್ತೆಯ ಮೃತದೇಹವನ್ನು ಮರು ಮರಣೋತ್ತರ ಪರೀಕ್ಷೆ ನಡೆಸಲು ಅವಕಾಶ ನೀಡದ ರೀತಿಯಲ್ಲಿ ಬಲವಂತವಾಗಿ ಯುಪಿ ಪೊಲೀಸರು ಅಂತ್ಯಕ್ರಿಯೆ ನಡೆಸಿದ್ದಾರೆ. ಇದೀಗ ಯುವತಿಯ ಮೇಲೆ ಅತ್ಯಾಚಾರ ನಡೆದಿಲ್ಲ ಎನ್ನುತ್ತಾರೆ. ಇದರ ವಿರುದ್ಧ ಇಡೀ ದೇಶದ ಜನತೆ ಒಗ್ಗಟ್ಟಿನಿಂದ ಹೋರಾಟ ಮಾಡಬೇಕಾದ ಅಗತ್ಯವಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ದಸಂಸ ಜಿಲ್ಲಾ ಪ್ರಧಾನ ಸಂಚಾಲಕ ಸುಂದರ್ ಮಾಸ್ತರ್ ಮಾತನಾಡಿ, ಉತ್ತರ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ದಲಿತರಿಗೆ ರಕ್ಷಣೆ ಇಲ್ಲದಾಗಿದೆ. ದಲಿತರು, ಬಡವರ ಮೇಲೆ ನಿರಂತರ ದಬ್ಬಾಳಿಕೆ, ದೌರ್ಜನ್ಯ ನಡೆಯುತ್ತಿದ್ದು, ಆಡಳಿತ ಸರ್ಕಾರ ಇದಕ್ಕೆ ಕುಮ್ಮಕ್ಕು ನೀಡುತ್ತಿದೆ ಎಂದು ಟೀಕಿಸಿದರು.

ಸಹಬಾಳ್ವೆ ಅಧ್ಯಕ್ಷ ಅಮೃತ್ ಶೆಣೈ, ಧರ್ಮಗುರು ಫಾ.ವಿಲಿಯಂ ಮಾರ್ಟಿಸ್, ಜಿಲ್ಲಾ ಮುಸ್ಲಿಮ್ ಒಕ್ಕೂಟದ ಅಧ್ಯಕ್ಷ ಯಾಸೀನ್ ಮಲ್ಪೆ, ದಸಂಸ ಸಂಘಟನಾ ಸಂಚಾಲಕ ಶ್ಯಾಮ್‌ರಾಜ್ ಬಿರ್ತಿ, ದಲಿತ ಮುಖಂಡರಾದ ಎಸ್.ಎಸ್.ಪ್ರಸಾದ್, ಮಂಜುನಾಥ ಬಾಳ್ಕುದ್ರು, ಸುಂದರಿ ಪುತ್ತೂರು, ಯುವರಾಜ್, ಚಿಂತಕ ಪ್ರೊ.ಫಣಿರಾಜ್, ಕಾಂಗ್ರೆಸ್ ಮುಖಂಡ ಜನಾರ್ದನ್ ಭಂಡಾರ್ಕರ್, ಸಿಪಿಎಂ ಮುಖಂಡ ಬಾಲಕೃಷ್ಣ ಶೆಟ್ಟಿ ಮೊದಲಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.