ದಕ್ಷಿಣ ಕನ್ನಡ: ಪುತ್ತೂರು ಪ್ರವೇಶಿಸಿದ ಅಯೋಧ್ಯೆ ಶ್ರೀರಾಮ ಜನ್ಮಭೂಮಿ ಮಂದಿರದ ಅಕ್ಷತೆ

ಪುತ್ತೂರು(ದಕ್ಷಿಣ ಕನ್ನಡ): ರಥ ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ರಥಬೀದಿ ಮೂಲಕ ಆಗಮಿಸಿತುಶ್ರೀ ರಾಮನ ಪ್ರತಿಷ್ಠಾಪನೆ ಮಹೋತ್ಸವದ ಹಿನ್ನೆಲೆ ಅಯೋಧ್ಯೆಯಿಂದ ಅಕ್ಷತೆ ಹೊತ್ತ ರಥ ಪುತ್ತೂರಿಗೆ ಆಗಮಿಸಿದೆ. ಅಯೋಧ್ಯೆ ಶ್ರೀರಾಮ ಜನ್ಮಭೂಮಿ ಮಂದಿರದಲ್ಲಿ ಜ.22 ರಂದು ನಡೆಯಲಿರುವ ಶ್ರೀ ರಾಮನ ಪ್ರತಿಷ್ಠಾಪನೆ ಮಹೋತ್ಸವದ ಹಿನ್ನೆಲೆ, ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ವತಿಯಿಂದ ದೇಶಾದ್ಯಂತ ಏಕಕಾಲದಲ್ಲಿ ನಡೆಯುತ್ತಿರುವ ಅಕ್ಷತೆ ವಿತರಣೆ ಕಾರ್ಯಕ್ರಮದ ಭಾಗವಾಗಿ ಅಯೋಧ್ಯೆಯಿಂದ ಅಕ್ಷತೆ ಹೊತ್ತ ರಥ ಇಂದು ಪುತ್ತೂರನ್ನು ಪ್ರವೇಶಿಸಿದೆ.

ರಾಮದೇವರ ಪ್ರತಿಷ್ಠಾಪನೆಯ ದಿನ ಎಲ್ಲರಿಗೂ ಅವಕಾಶ ಇರುವುದಿಲ್ಲ: ಇತ್ತೀಚಿಗೆ, ಮಂಗಳೂರಿನಲ್ಲಿ ಮಾತನಾಡಿದ್ದ ಪೇಜಾವರ ಮಠಾಧೀಶ ವಿಶ್ವಪ್ರಸನ್ನ ಸ್ವಾಮೀಜಿ, ಅಯೋಧ್ಯೆಯ ರಾಮಮಂದಿರದಲ್ಲಿ ಮಕರಸಂಕ್ರಾಂತಿ ಮುಗಿಯುತ್ತಿದ್ದಂತೆ ಉತ್ತರಾಯಣದ ಪರ್ವಕಾಲದ ಜನವರಿ 22ರ ಅಭಿಜಿನ್ ಮುಹೂರ್ತದಲ್ಲಿ ಶ್ರೀರಾಮದೇವರ ಪ್ರಾಣ ಪ್ರತಿಷ್ಠಾಪನೆ ನಡೆಯಲಿದೆ. ಪ್ರಧಾನಿ ಮೋದಿ ಮಂದಿರದ ಉದ್ಘಾಟನೆ ಮಾಡಲಿದ್ದಾರೆ. ರಾಮದೇವರ ಪ್ರತಿಷ್ಠಾಪನೆಯ ದಿನ ಎಲ್ಲರಿಗೂ ಅವಕಾಶ ಇರುವುದಿಲ್ಲ. ಹಾಗಾಗಿ ತಮ್ಮದೇ ಊರಿನ ದೇವಮಂದಿರಗಳಲ್ಲಿ ಅಳವಡಿಸಿರುವ ಬೃಹತ್ ಪರದೆಯಲ್ಲಿ ದೃಶ್ಯ ವೀಕ್ಷಣೆ ಮಾಡಬೇಕು. ಬಳಿಕ ಪೂಜೆ, ಭಜನೆ ಪ್ರಸಾದ ವಿತರಣೆ ಮಾಡಬೇಕು. ರಾತ್ರಿ ಹೊತ್ತು 5 ಶತಮಾನಗಳ ದ್ಯೋತಕವಾಗಿ ಐದು ದೀಪಗಳನ್ನು ಬೆಳಗಬೇಕು. ಜನವರಿ 23ರಿಂದ ಮಾರ್ಚ್ 10ರ ವರೆಗೆ 48 ದಿನಗಳ ಕಾಲ ರಾಮಮಂದಿರದಲ್ಲಿ ಮಂಡಲ ಉತ್ಸವ ನಡೆಯುತ್ತದೆ ಎಂದು ತಿಳಿಸಿದ್ದರು.

ಅಕ್ಷತೆಯನ್ನು ಪ್ರತೀ ಮನೆಗಳಿಗೆ ತಲುಪಿಸುವ ನಿಟ್ಟಿನಲ್ಲಿ ಮನೆ ಮನೆ ಸಂಪರ್ಕ ಅಭಿಯಾನ ಜ.1 ರಿಂದ 15 ರ ತನಕ ನಡೆಯಲಿದೆ. ಈ ಸಂದರ್ಭದಲ್ಲಿ ಪ್ರತಿಯೊಬ್ಬ ಹಿಂದೂವಿನ ಮನೆಗೆ ಈ ಅಕ್ಷತೆಯನ್ನು ಸಂಪರ್ಕ ಅಭಿಯಾನದ ಮೂಲಕ ತಲುಪಿಸಲಾಗುತ್ತದೆ. ಜ.7 ರಂದು ಸಂಪರ್ಕ ಅಭಿಯಾನಕ್ಕೆ ವೇಗ ನೀಡುವ ನಿಟ್ಟಿನಲ್ಲಿ ಮಹಾಸಂಪರ್ಕ ಅಭಿಯಾನ ನಡೆಯಲಿದೆ. ಈ ಸಂದರ್ಭದಲ್ಲಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ, ಸಮಿತಿ ಸದಸ್ಯರು, ಮಾಜಿ ಶಾಸಕ ಸಂಜೀವ ಮಠಂದೂರು, ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಜಿಲ್ಲಾ ಸಮಿತಿ ಸಂಯೋಜಕ ರವೀಂದ್ರ ಪಿ., ಸಂಚಾಲಕ ಡಾ. ಕೃಷ್ಣ ಪ್ರಸನ್ನ ಸೇರಿದಂತೆ ಮತ್ತಿತರ ಸದಸ್ಯರು, ಭಕ್ತಾದಿಗಳು ಉಪಸ್ಥಿತರಿದ್ದರು.. ಈ ವೇಳೆ ರಥವನ್ನು ಕಲಶ ಹಿಡಿದ ಮಹಿಳೆಯರು ಸ್ವಾಗತಿಸಿದರು. ಬಳಿಕ ಅಕ್ಷತೆ ತುಂಬಿದ ಕಲಶವನ್ನು ಮೆರವಣಿಗೆ ಮೂಲಕ ದೇವಸ್ಥಾನದ ಹೊರಾಂಗಣದಲ್ಲಿ ಸುತ್ತಿ, ನಂತರ ದೇವಸ್ಥಾನದ ಒಳಾಂಗಣಕ್ಕೆ ಕೊಂಡೊಯ್ಯಲಾಯಿತು. ಗರ್ಭಗುಡಿಯಲ್ಲಿ ಅಕ್ಷತೆಯನ್ನಿರಿಸಿ ಪ್ರಾರ್ಥನೆ ಮೂಲಕ ಪೂಜೆ ನೆರವೇರಿಸಲಾಯಿತು. ಬಳಿಕ ಅಕ್ಷತೆಯನ್ನು ಪಾವಿತ್ರ್ಯತೆಯೊಂದಿಗೆ ಇರಿಸಲಾಯಿತು.