ಉಡುಪಿ: ಕೇಂದ್ರ ಸರ್ಕಾರದ ಮೀನುಗಾರಿಕೆ ಇಲಾಖೆ ಹಾಗೂ ರಾಷ್ಟ್ರೀಯ ಮೀನುಗಾರಿಕಾ ಅಭಿವೃದ್ಧಿ ಮಂಡಳಿ ವತಿಯಿಂದ ಮೀನುಗಾರಿಕಾ ಸಹಕಾರಿ ಸಂಘ ವಿಭಾಗದಲ್ಲಿ ನೀಡಲಾಗುವ ರಾಷ್ಟ್ರೀಯ ಅತ್ಯುತ್ತಮ ಮೀನುಗಾರಿಕಾ ಸಹಕಾರಿ ಸಂಸ್ಥೆ ಪ್ರಶಸ್ತಿಯು ಪ್ರಸಕ್ತ ಸಾಲಿನಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್ ಗೆ ಲಭಿಸಿದೆ.
ಅಹಮದಾಬಾದ್ ನಲ್ಲಿ ವಿಶ್ವ ಮೀನುಗಾರಿಕೆ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಗ್ಲೋಬಲ್ ಫಿಷರೀಸ್ ಕಾನ್ಫರೆನ್ಸ್ ಇಂಡಿಯಾ ಸಮಾರಂಭದಲ್ಲಿ ದ.ಕ ಉಡುಪಿ ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ಹಾಗೂ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ ಖಾತೆ ಸಚಿವ ಪರ್ಶೋತ್ತಮ ರೂಪಾಲ ಇವರಿಂದ ಪ್ರಶಸ್ತಿ ಸ್ವೀಕರಿಸಿದರು.
ದ.ಕ ಮೀನು ಮಾರಾಟ ಫೆಡರೇಶನ್ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಸುಮಾರು 85 ಸಾವಿರ ಸದಸ್ಯರು ಹಾಗೂ 73 ಸದಸ್ಯ ಸಹಕಾರಿ ಸಂಸ್ಥೆಗಳನ್ನು ಒಳಗೊಂಡಿದ್ದು, ಸಂಸ್ಥೆಯ ಮೂಲಕ ರಾಜ್ಯ ಹಾಗೂ ಕೇಂದ್ರ ಸರಕಾರದ ಮೀನುಗಾರಿಕೆಗೆ ಸಂಬಂಧಿಸಿದ ಯೋಜನೆಗಳನ್ನು ಪರಿಣಾಮಕಾರಿ ಅನುಷ್ಠಾನ, ಸದಸ್ಯರ ಮಕ್ಕಳ ಶಿಕ್ಷಣವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ವಿದ್ಯಾರ್ಥಿ ವೇತನ, ಆರೋಗ್ಯ ವಿಮೆ, ಮೀನುಗಾರಿಕಾ ಚಟುವಟಿಕೆಗಳಿಗೆ ಪ್ರೋತ್ಸಾಹ, ಮತ್ಸ್ಯಮೇಳ ಆಯೋಜನೆ ಮೂಲಕ ಮೀನುಗಾರಿಕೆ ಉತ್ನನ್ನಗಳಿಗೆ ಪ್ರೋತ್ಸಾಹ ಸಹಿತ ಸಂಸ್ಥೆಯ ಸಮಾಜಮುಖಿ ಕಾರ್ಯಕ್ರಮಗಳನ್ನು ಗುರುತಿಸಿ ಕೇಂದ್ರ ಸರ್ಕಾರ ಈ ಪ್ರಶಸ್ತಿಗೆ ಆಯ್ಕೆ ಮಾಡಿದೆ.
ದಕ್ಷಿಣ ಕನ್ನಡ ಉಡುಪಿ ಜಿಲ್ಲಾ ಮೀನು ಮಾರಾಟ ಫೆಡರೇಶನ್ ತನ್ನ ಅತ್ಯುತ್ತಮ ಕಾರ್ಯ ಚಟುವಟಿಕೆಗಳಿಗಾಗಿ 2015 ರಲ್ಲಿ ಅತ್ಯುತ್ತಮ ಮೀನುಗಾರ ಸಹಕಾರಿ ಸಂಘ ರಾಷ್ಟ್ರ ಪ್ರಶಸ್ತಿ, 2020ನೇ ಸಾಲಿನ ರಾಜ್ಯ ಮಟ್ಟದ ಅತ್ಯುತ್ತಮ ಸಹಕಾರಿ ಮೀನು ಮಾರಾಟ ಮಹಾಮಂಡಳ ಪ್ರಶಸ್ತಿ ಸಹಿತ ಹಲವು ಪ್ರಶಸ್ತಿಗಳಿಗೆ ಸಂಸ್ಥೆ ಮುಡಿಗೇರಿಸಿಕೊಂಡಿದೆ.
ಸಮಾರಂಭದಲ್ಲಿ ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಅರ್. ಪಟೇಲ್, ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಖಾತೆ ರಾಜ್ಯ ಸಚಿವರಾದ ಶ್ರೀ ಎಲ್. ಮುರುಗನ್, ಡಾ. ಸಂಜೀವ್ ಬಲ್ಯಾನ್, ಮೀನುಗಾರಿಕೆ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.