ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಚಲನಚಿತ್ರೋತ್ಸವ:  “ಗಾಡ್ಸ್ ವೈವ್ಸ್ ಮೆನ್ಸ್ ಸ್ಲೇವ್ಸ್” ಸಾಕ್ಷ್ಯ  ಚಲನಚಿತ್ರಕ್ಕೆ  ವಿಶೇಷ ಪ್ರಶಸ್ತಿ

ನವದೆಹಲಿ : ದಕ್ಷಿಣ ಕನ್ನಡ ಜಿಲ್ಲೆಯ  ಪುತ್ತೂರಿನ ಯುವ ಸಂಶೋಧಕಿ,  ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಹಳೆ ವಿದ್ಯಾರ್ಥಿನಿ   ಪೂರ್ಣಿಮಾ ರವಿ   ನಿರ್ದೇಶಿಸಿರುವ “ಗಾಡ್ಸ್ ವೈವ್ಸ್ ಮೆನ್ಸ್ ಸ್ಲೇವ್ಸ್” ಸಾಕ್ಷ್ಯ ಚಲನಚಿತ್ರ ಪ್ರತಿಷ್ಠಿತ 14 ನೇ ದಾದಾ ಸಾಹೇಬ್ ಫಾಲ್ಕೆ ಚಲನಚಿತ್ರೋತ್ಸವ 2024ದಲ್ಲಿ  (ಡಿ  ಎಸ್  ಪಿ  ಎಫ್  ಎಫ್  24 DSPFF-24) ದಲ್ಲಿ  ಚಲನ ಚಿತ್ರೋತ್ಸವದ  ವಿಶೇಷ  ಪ್ರಶಸ್ತಿಗೆ ಭಾಜನವಾಗಿದೆ.  

ಮಂಗಳವಾರ (ಏಪ್ರಿಲ್ 30ರಂದು) ನವದೆಹಲಿಯಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಿರ್ದೇಶಕಿ ಪೂರ್ಣಿಮಾ ರವಿ ಹಾಗು ಸಾಕ್ಷ ಚಲನಚಿತ್ರ ಕಾರ್ಯಕಾರಿ ನಿರ್ಮಾಪಕ ರವಿ ನಾರಾಯಣ ಪ್ರಶಸ್ತಿ  ಸ್ವೀಕರಿಸಿದರು. ವಿಶ್ವದಾದ್ಯಂತದಿಂದ  ಸುಮಾರು 700 ಚಲನ ಚಿತ್ರಗಳು ಈ ಚಲನ ಚಿತ್ರೋತ್ಸವಕ್ಕೆ ನಾಮಕರಣಗೊಂಡಿದ್ದವು.

ಈ   “ಗಾಡ್ಸ್ ವೈವ್ಸ್ ಮೆನ್ಸ್ ಸ್ಲೇವ್ಸ್” ಸಾಕ್ಷ್ಯ  ಚಲನಚಿತ್ರದಲ್ಲಿ ಕರ್ನಾಟಕದ ಸುಮಾರು  40 ಕ್ಕೂ ಹೆಚ್ಚು ದೇವದಾಸಿಯರ ಜೀವನದ ವ್ಯಥೆ, ಅವರ ಕನಸುಗಳು, ಹಾಗು ಈ ಸಾಮಾಜಿಕ  ಅನಿಷ್ಟ ಪದ್ಧತಿ  ಸಮಾಜದಿಂದ  ತೊಲಗಳು  ಆಗಬೇಕಿರುವ ಪರಿವರ್ತನೆಗಳ ಬಗ್ಗೆ ಚರ್ಚಿಸಲಾಗಿದೆ.

ಅರ್ಮೇನಿಯಾದ ಚಲನಚಿತ್ರ ನಿರ್ದೇಶಕರಾದ ರೋಮನ್ ಮುಶೆಗ್ಯಾನ್,  ಜಪಾನ್‌ನ ಚಲನಚಿತ್ರ ನಿರ್ದೇಶಕ ನವೋಕಿ ಮತ್ಸುಮುರಾ,; ಸ್ಪೇನ್‌ನ ಚಲನಚಿತ್ರ ನಿರ್ದೇಶಕ ಫ್ರಾನ್ಸಿಸ್ಕೊ ಸ್ಯಾಂಚೆಜ್ ಪಲಾಝೋನ್,; ವೆನೆಜುವೆಲಾದ ಚಲನಚಿತ್ರ ನಿರ್ದೇಶಕ ಮತ್ತು ವೆನೆಜುವೆಲಾದ ರಾಯಭಾರ ಕಚೇರಿಯ ಸಲಹೆಗಾರ   ಆಲ್ಫ್ರೆಡೋ ಕಾಲ್ಡೆರಾ,;  ರಾಷ್ಟ್ರೀಯ ಪ್ರಶಸ್ತಿ ವಿಜೇತ ಚಲನಚಿತ್ರ ನಿರ್ದೇಶಕ ಜಿ ಎಲ್ ಭಾರದ್ವಾಜ್,  ಚೀನಾದ  ಚಲನಚಿತ್ರ ನಿರ್ದೇಶಕಿ  ರಾನ್ ಲಿ,  ಅಮೆರಿಕಾದ  ಚಲನಚಿತ್ರ ನಿರ್ದೇಶಕ ಜೇಕ್ ಬೈರ್ಡ್ ತೀರ್ಪುಗಾರರ ತಂಡದಲ್ಲಿದ್ದರು.  ಡಾ. ಡಿ ಸಿ ಸಿಂಗ್, ಈ ತಂಡದ ಸಮನ್ವಯಕಾರರಾಗಿದ್ದರು.

ಸಾಕ್ಷ್ಯ ಚಲನಚಿತ್ರ ನಿರ್ದೇಶಕಿ ಪೂರ್ಣಿಮಾ  ರವಿ, ಮಂಗಳೂರು ವಿಶ್ವವಿದ್ಯಾನಿಲಯದ ಇಂಗ್ಲಿಷ್ ವಿಭಾಗದಲ್ಲಿ ಸಂಶೋಧನಾ ವಿದ್ಯಾರ್ಥಿನಿಯಾಗಿದ್ದು  ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ ಎಂ ಕಾರಿಯಪ್ಪ ಕಾಲೇಜಿನ ಇಂಗ್ಲಿಷ್ ಸಹ ಪ್ರಾಧ್ಯಾಪಕರಾದ ಡಾ.  ನಯನಾ ಕಶ್ಯಪ್ ಅವರ ಮಾರ್ಗದರ್ಶನದಲ್ಲಿ ಪಿಎಚ್‌ಡಿ ಅಧ್ಯಯನವನ್ನು ಮಾಡುತ್ತಿದ್ದಾರೆ.  ಪ್ರಸ್ತುತ ಪುತ್ತೂರಿನ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಅವರು ಅತಿಥಿ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಈ ಸಾಕ್ಷ್ಯ ಚಲನಚಿತ್ರಕ್ಕೆ ನಿರ್ದೇಶಕಿ ಪೂರ್ಣಿಮಾ ರವಿ ಅವರೇ  ದ್ವನಿ  ಮತ್ತು ಉಪಶೀರ್ಷಿಕೆಗಳ ಜೊತೆಗೆ ಚಿತ್ರಕಥೆಯನ್ನು ಬರೆದಿದ್ದಾರೆ.

 ಚಂದ್ರಶೇಖರ ಹೆಗ್ಡೆ (ಸಂಗೀತ ನಿರ್ದೇಶಕ), ರಕ್ಷಿತ್ ರೈ (ಸಂಕಲನ), ನಿಹಾಲ್ ನೂಜಿಬೈಲ್ (ಡಿಒಪಿ), ಸುನೀತಾ ಪ್ರವೀಣ್ (ಗಾಯಕಿ), ಸ್ವರ್ಣಶ್ರೀ ಪಟ್ಟೆ (ಗೀತರಚನೆಕಾರ), ಪ್ರವೀಣ್ ವರ್ಣಕುಟೀರ  (ಸೃಜನಾತ್ಮಕ ಸಲಹೆಗಾರ), ಅಲೋಕ್ ನೂಜಿಬೈಲು (ಸೃಜನಾತ್ಮಕ ಪಾಲುದಾರ ) ಮತ್ತು ರವಿ ನಾರಾಯಣ (ಕಾರ್ಯನಿರ್ವಾಹಕ ನಿರ್ಮಾಪಕ) ಚಿತ್ರ ತಂಡದ ಭಾಗವಾಗಿದ್ದಾರೆ.