ಡಿ.ಕೆ. ಶಿವಕುಮಾರ್ ಪ್ರಮಾಣವಚನ: ಸದ್ಯ 13 ಸಚಿವರ ಲಿಸ್ಟ್ ರೆಡಿ ! ಯಾರೆಲ್ಲಾ ಇದ್ದಾರೆ?

ಬೆಂಗಳೂರು: ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಇಂದು ಪ್ರಮಾಣವಚನ ಸ್ವೀಕರಿಸಲಿದ್ದು, ಅವರೊಂದಿಗೆ 13 ಮಂದಿ ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಪ್ರಮಾಣವಚನ ಸಮಾರಂಭಕ್ಕಾಗಿ ಬೆಂಗಳೂರಿನ ಲೋಕಭವನದ ಗಾಜಿನ ಮನೆಯಲ್ಲಿ ಭರದ ಸಿದ್ಧತೆಗಳು ನಡೆದಿವೆ. ವೇದಿಕೆಯಲ್ಲಿ 20 ಆಸನಗಳ ವ್ಯವಸ್ಥೆ ಮಾಡಲಾಗಿದ್ದು, ವಿವಿಧ ಧರ್ಮಗಳ ಪ್ರತಿನಿಧಿಗಳಾದ ಸ್ವಾಮೀಜಿಗಳು, ಫಾದರ್‌ಗಳು ಹಾಗೂ ಮೌಲ್ವಿಗಳು ಸೇರಿದಂತೆ ಸುಮಾರು 55 ಧಾರ್ಮಿಕ ಮುಖಂಡರಿಗೆ ಆಹ್ವಾನ ನೀಡಲಾಗಿದೆ. ಅವರ ಸಮ್ಮುಖದಲ್ಲೇ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಹುದ್ದೆಯ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎನ್ನಲಾಗಿದೆ.

ಸಮಾರಂಭಕ್ಕೆ ಕಾಂಗ್ರೆಸ್ ನಾಯಕರುಗಳಾದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಕೆ.ಸಿ. ವೇಣುಗೋಪಾಲ್, ರಣದೀಪ್ ಸಿಂಗ್ ಸುರ್ಜೇವಾಲಾ ಸೇರಿದಂತೆ ಹಲವು ಗಣ್ಯರಿಗೆ ಆಹ್ವಾನ ನೀಡಲಾಗಿದೆ. ಈಗಾಗಲೇ ವಿವಿಧ ರಾಜ್ಯಗಳ ಕಾಂಗ್ರೆಸ್ ನಾಯಕರು ಬೆಂಗಳೂರಿಗೆ ಆಗಮಿಸುತ್ತಿದ್ದಾರೆ.

ರಾಜಕೀಯ ಜೀವನದ ಹಲವು ಏರುಪೇರುಗಳು, ಐಟಿ ಹಾಗೂ ಇಡಿ ತನಿಖೆಗಳು ಮತ್ತು ಜೈಲುವಾಸದ ಅನುಭವಗಳ ನಂತರ ಡಿ.ಕೆ. ಶಿವಕುಮಾರ್ ರಾಜ್ಯದ ಅತ್ಯುನ್ನತ ಹುದ್ದೆಯನ್ನು ಅಲಂಕರಿಸುತ್ತಿದ್ದಾರೆ.

ಸಚಿವರ ಪಟ್ಟಿ ಅಂತಿಮ?

ಸಚಿವ ಸಂಪುಟದ ಮೊದಲ ಹಂತದ ಪಟ್ಟಿಯನ್ನು ಅಂತಿಮಗೊಳಿಸಲು ಕಾಂಗ್ರೆಸ್ ಹೈಕಮಾಂಡ್ ಮಟ್ಟದಲ್ಲಿ ಹಲವು ಸುತ್ತಿನ ಸಭೆಗಳು ನಡೆದಿವೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸದಲ್ಲಿ ನಡೆದ ಸಭೆಯಲ್ಲಿ ರಾಹುಲ್ ಗಾಂಧಿ, ಕೆ.ಸಿ. ವೇಣುಗೋಪಾಲ್, ರಣದೀಪ್ ಸಿಂಗ್ ಸುರ್ಜೇವಾಲಾ, ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಭಾಗವಹಿಸಿ ಸಚಿವರ ಪಟ್ಟಿಗೆ ಅಂತಿಮ ರೂಪ ನೀಡಿದ್ದಾರೆ ಎಂದು ಹೇಳಲಾಗಿದೆ.

ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆಯಿರುವ ಸಚಿವರು

  • ಡಾ. ಜಿ. ಪರಮೇಶ್ವರ್ (ಕೊರಟಗೆರೆ)
  • ಯು.ಟಿ. ಖಾದರ್ (ಮಂಗಳೂರು)
  • ರಾಮಲಿಂಗಾರೆಡ್ಡಿ (ಬಿಟಿಎಂ ಲೇಔಟ್)
  • ಕೆ.ಜೆ. ಜಾರ್ಜ್ (ಸರ್ವಜ್ಞನಗರ)
  • ಪ್ರಿಯಾಂಕ್ ಖರ್ಗೆ (ಚಿತ್ತಾಪುರ)
  • ಸತೀಶ್ ಜಾರಕಿಹೊಳಿ (ಯಮಕನಮರಡಿ)
  • ಎಂ.ಬಿ. ಪಾಟೀಲ್ (ಬಬಲೇಶ್ವರ)
  • ಕೃಷ್ಣ ಬೈರೇಗೌಡ (ಬ್ಯಾಟರಾಯನಪುರ)
  • ಯತೀಂದ್ರ ಸಿದ್ದರಾಮಯ್ಯ (ವಿಧಾನ ಪರಿಷತ್ ಸದಸ್ಯ)
  • ಬೈರತಿ ಸುರೇಶ್ (ಹೆಬ್ಬಾಳ)
  • ಕೆ.ಎಚ್. ಮುನಿಯಪ್ಪ (ದೇವನಹಳ್ಳಿ)
  • ಈಶ್ವರ್ ಖಂಡ್ರೆ
  • ಶರಣಪ್ರಕಾಶ್ ಪಾಟೀಲ್

ಇವರೊಂದಿಗೆ ಮೊದಲ ಹಂತದ ಸಚಿವ ಸಂಪುಟ ರಚನೆಯಾಗುವ ಸಾಧ್ಯತೆ ಇದ್ದು, ಅಧಿಕೃತ ಘೋಷಣೆ ಪ್ರಮಾಣವಚನ ಸಮಾರಂಭದ ವೇಳೆ ಅಥವಾ ಅದಕ್ಕೂ ಮುನ್ನ ಹೊರಬೀಳುವ ನಿರೀಕ್ಷೆಯಿದೆ.