ದ. ಕ. ಮತ್ತು ಉಡುಪಿ ಜಿಲ್ಲಾ ಮೀನು ಮಾರಾಟ ಫೆಡರೇಶನ್ ವತಿಯಿಂದ 1455 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಣೆ.

ಉಡುಪಿ: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್ ಇದರ ವತಿಯಿಂದ ಮಲ್ಪೆ ಏಳೂರು ಮೊಗವೀರ ಭವನದಲ್ಲಿ ಆಯೋಜಿಸಿದ್ದ ಉಡುಪಿ ಜಿಲ್ಲೆಯ 1455 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಣೆ ಸಮಾರಂಭ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಉಡುಪಿಯ ಖ್ಯಾತ ಮನೋ ವೈದ್ಯರಾದ ಡಾ. ಪಿ. ವಿ. ಭಂಡಾರಿ ಉದ್ಘಾಟಿಸಿದರು. .

ಸಮಾರಂಭದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಅವರು ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಜೀವನದಲ್ಲಿ ಯಶಸ್ವಿಯಾಗಲು ಶೈಕ್ಷಣಿಕ ಸಾಧನೆಯ ಜೊತೆ ಜೊತೆಗೆ ಸವಾಲುಗಳನ್ನು ಎದುರಿಸಲು ಧನಾತ್ಮಕ ಚಿಂತನೆಯೊಂದಿಗೆ ಮಾನಸಿಕ ಸ್ಥೈರ್ಯವನ್ನು ಹೆಚ್ಚಿಸಿಕೊಳ್ಳುವುದು ಅಗತ್ಯವಾಗಿದ್ದು, ಶಾಸಕ ಯಶ್ ಪಾಲ್ ಸುವರ್ಣ ನೇತೃತ್ವದಲ್ಲಿ ಮೀನು ಮಾರಾಟ ಫೆಡರೇಶನ್ ಹಾಗೂ ಮಹಾಲಕ್ಷ್ಮೀ ಬ್ಯಾಂಕ್ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಸುಮಾರು 1 ಕೋಟಿ ಮೊತ್ತದ ಪ್ರತಿಭಾ ಪುರಸ್ಕಾರವನ್ನು ವಿದ್ಯಾರ್ಥಿಗಳಿಗೆ ವಿತರಿಸುವ ಮೂಲಕ ಶಿಕ್ಷಣದ ಬಗ್ಗೆ ಸಾಮಾಜಿಕ ಬದ್ಧತೆ ಮೆರೆದಿದೆ ಎಂದರು.

ಸಮಾರಂಭದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಪ್ರಾಂಶುಪಾಲರಾದ ಅಶೋಕ್ ಕಾಮತ್ ಮಾತನಾಡಿ ವಿದ್ಯಾರ್ಥಿಗಳು ಶಾಲಾ ದಿನಗಳಿಂದಲೇ ಶಿಕ್ಷಣದೊಂದಿಗೆತಮ್ಮ ಅಭಿರುಚಿಯ ಚಟುವಟಿಕೆ, ಆಸಕ್ತಿಯ ವಿಷಯಗಳನ್ನು ಮೈಗೂಡಿಸಿಕೊಂಡು ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವ ಮೂಲಕ ಸಮಾಜಕ್ಕೆ ಒಂದು ಶಕ್ತಿಯಾಗಿ ಜೀವನವನ್ನು ರೂಪಿಸಿಕೊಳ್ಳಲು ವಿದ್ಯಾರ್ಥಿಗಳು ಮುಂದಾಗಬೇಕು ಎಂದರು.

ಸಮಾರಂಭದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರಾದ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ವಹಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.

ಸಮಾರಂಭದಲ್ಲಿ 2025ನೇ ಸಾಲಿನ ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತರಾದ ಮಲ್ಪೆ ಯಾಂತ್ರಿಕ (ಟ್ರಾಲ್) ದೋಣಿ ಮೀನುಗಾರರ ಸಹಕಾರಿ ಸಂಘದ ಅಧ್ಯಕ್ಷರಾದ ರಾಮಚಂದ್ರ ಕುಂದರ್, ಮಲ್ಪೆ ಪರ್ಸೀನ್ ಮೀನುಗಾರರ ಸಂಘದ ಅಧ್ಯಕ್ಷರಾದ ನಾಗರಾಜ ಸುವರ್ಣ ಹಾಗೂ ಸ್ಕೂಲ್ ಗೇಮ್ಸ್ ಫೆಡರೇಷನ್ ಆಫ್ ಇಂಡಿಯಾ ರಾಷ್ಟ್ರೀಯ ಚೆಸ್ ಪಂದ್ಯಾಟದಲ್ಲಿ ಕಂಚಿನ ಪದಕ ವಿಜೇತ ಕ್ರೀಡಾ ಸಾಧಕಿ ರಿಮ ರಾವ್ ಯು. ಬಿ. ರವರಿಗೆ ಸನ್ಮಾನಿಸಿ ಗೌರವಿಸಲಾಯಿತು.

ಸಮಾರಂಭದಲ್ಲಿ ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಅಧ್ಯಕ್ಷರಾದ ಜಯ ಸಿ. ಕೋಟ್ಯಾನ್, ಮಲ್ಪೆ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷರಾದ ಗೋಪಾಲ ಸಿ. ಬಂಗೇರ, ನಗರಸಭೆ ಸದಸ್ಯರಾದ ಯೋಗೀಶ್ ಸಾಲ್ಯಾನ್ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ಸಮಾರಂಭದಲ್ಲಿ ಮತ್ಸ್ಯೋದ್ಯಮಿ ಆನಂದ ಪಿ. ಸುವರ್ಣ, ಮಲ್ಪೆ ಏಳೂರು ಮೊಗವೀರ ಮಹಾಜನ ಸಂಘದ ಅಧ್ಯಕ್ಷ ರತ್ನಾಕರ ಸಾಲ್ಯಾನ್, ಆಳ ಸಮುದ್ರ ಮೀನುಗಾರರ ಸಹಕಾರಿ ಸಂಘದ ಅಧ್ಯಕ್ಷರಾದ ಸುಭಾಷ್ ಮೆಂಡನ್, ಮಲ್ಪೆ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘದ ಅಧ್ಯಕ್ಷರಾದ ಸತೀಶ್ ಕುಂದರ್, ಕೋಟ ಪರ್ಸೀನ್ ಮೀನುಗಾರರ ಸಹಕಾರಿ ಸಂಘದ ಅಧ್ಯಕ್ಷರಾದ ರಾಜೇಂದ್ರ ಸುವರ್ಣ, ಮಲ್ಪೆ ಮಹಿಳಾ ಮೀನುಗಾರರ ಸಹಕಾರಿ ಸಂಘದ ಅಧ್ಯಕ್ಷರಾದ ಶ್ರೀಮತಿ ಗೀತಾ ಕರ್ಕೇರ, ನಗರಸಭೆಯ ಸದಸ್ಯರುಗಳಾದ ಸುಂದರ ಕಲ್ಮಾಡಿ, ಶ್ರೀಮತಿ ಎಡ್ಲಿನ್ ಕರ್ಕಡ, ಫೆಡರೇಶನ್ ಉಪಾಧ್ಯಕ್ಷರಾದ ದೇವಪ್ಪ ಕಾಂಚನ್, ವ್ಯವಸ್ಥಾಪಕ ನಿರ್ದೇಶಕಿ ಶ್ರೀಮತಿ ದರ್ಶನ್ ಟಿ. ಕೆ., ಹಾಗೂ ಸಂಸ್ಥೆಯ ನಿರ್ದೇಶಕರು ಉಪಸ್ಥಿತರಿದ್ದರು. ಶ್ರೀಮತಿ ವಿಜೇತ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಶಿಕ್ಷಣಕ್ಕೆ ಪ್ರೋತ್ಸಾಹಿಸುವ ಮೂಲಕ ವಿಕಸಿತ ಭಾರತ ನಿರ್ಮಾಣದ ಸಂಕಲ್ಪ ಸಾಕಾರ

ಪ್ರಸಕ್ತ ಸಾಲಿನಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಮೀನು ಮಾರಾಟ ಫೆಡರೇಶನ್ ಹಾಗೂ ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕ್ ವತಿಯಿಂದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಸುಮಾರು 3 ಸಾವಿರ ವಿದ್ಯಾರ್ಥಿಗಳಿಗೆ 1 ಕೋಟಿ ವೆಚ್ಚದಲ್ಲಿ ಪ್ರತಿಭಾ ಪುರಸ್ಕಾರ ವಿತರಿಸಿ ವಿದ್ಯಾರ್ಥಿಗಳಿಗೆ ನೀಡಿರುವುದು ಅತ್ಯಂತ ಸಂತಸ ತಂದಿದೆ.

ಸಹಕಾರಿ ತತ್ವದಡಿ ಗ್ರಾಹಕರಿಗೆ ಸೇವೆ ನೀಡುತ್ತಾ ಗಳಿಸಿದ ಲಾಭಾಂಶದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ವಿಕಸಿತ ಭಾರತ ನಿರ್ಮಾಣದ ಸಂಕಲ್ಪ ಸಾಕಾರ ಮಾಡಲು ಶಿಕ್ಷಣಕ್ಕೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ
ವಿದ್ಯಾರ್ಥಿಗಳಿಗೆ ನಿರಂತರವಾಗಿ ಸಹಕಾರ ನೀಡುವ ಆಶಯ ಸಂಸ್ಥೆಯ ಮುಂದಿದೆ.

ಯಶ್ ಪಾಲ್ ಸುವರ್ಣ
ಶಾಸಕರು ಉಡುಪಿ
ಅಧ್ಯಕ್ಷರು, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್ ಮಂಗಳೂರು.